ತಮಿಳುನಾಡು:(ಅ.2) ಇಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳ ವಿವರಗಳನ್ನು ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ⭕ಪುಣೆಯಲ್ಲಿ ಹೆಲಿಕಾಪ್ಟರ್ ಪತನ – ಮೂವರು ಸಾವು.!!
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವೆಲ್ಲಿಯಂಗಿರಿ ತಪ್ಪಲಿನಲ್ಲಿರುವ ಇಶಾ ಫೌಂಡೇಶನ್‌ನ ಆಶ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು, ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ್ದಾರೆ.
ಜಗ್ಗಿ ವಾಸುದೇವ್ ನಡೆಸುತ್ತಿರುವ ಇಶಾ ಫೌಂಡೇಶನ್‌ನಲ್ಲಿ ತನ್ನ ಇಬ್ಬರು ಪುತ್ರಿಯರನ್ನು ಬಂಧಿಯಾಗಿಸಿ, ಅಲ್ಲಿ ಬ್ರೈನ್‌ವಾಶ್ ಮಾಡಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರ ಪೀಠ, ಇಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳ ವಿವರಗಳನ್ನು ನೀಡುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರಿಗೆ ಆದೇಶಿಸಿದೆ.
ಇಶಾ ಯೋಗ ಕೇಂದ್ರದಲ್ಲಿನ ಬೋಧನೆಗಳಿಂದ ಪ್ರಭಾವಿತರಾದ ಹೆಣ್ಣುಮಕ್ಕಳ ಬ್ರೈನ್ ವಾಶ್ ಆಗಿದ್ದು, ಸನ್ಯಾಸಿ ಮಾರ್ಗವನ್ನು ಅನುಸರಿಸಿದ್ದಾರೆ. ಅವರ ಹೆಸರನ್ನು ಬದಲಾಯಿಸಲಾಗಿದೆ. ಈಗ ಪೋಷಕರನ್ನೂ ಭೇಟಿ ಮಾಡಲು ಅವರು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇಶಾ ಫೌಂಡೇಶನ್‌ನ ಕುರಿತು ಜಿಲ್ಲಾ ಪೊಲೀಸರು ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ ಬಳಿಕ, ಅದರ ವರದಿಯನ್ನು ಮುಂದಿನ ವಿಚಾರಣೆ ದಿನ (ಅ. 4) ಸಲ್ಲಿಸುವಂತೆ ನ್ಯಾಯಪೀಠವು ಸೂಚಿಸಿದೆ.
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕಾರ್ತಿಕೇಯನ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಆರ್.ಅಂಬಿಕಾ ಹಾಗೂ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 7.30ರವರೆಗೆ ವಿಚಾರಣೆ, ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರ ರಾತ್ರಿ ವಿಚಾರಣೆ ಪೂರ್ಣಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯನ್, “ನ್ಯಾಯಾಲಯದ ಆದೇಶದ ಮೇರೆಗೆ ಆಶ್ರಮದಲ್ಲಿರುವವರನ್ನು ವಿಚಾರಣೆ ನಡೆಸಲಾಗಿದೆ. ತನಿಖೆಗೆ ಅವರು ಸಂಪೂರ್ಣವಾಗಿ ಸಹಕರಿಸಿದ್ದಾರೆ. ಇಂದಿನ ವಿಚಾರಣೆ ಪೂರ್ಣಗೊಂಡಿದ್ದು, ಬುಧವಾರದಂದು ಪುನರಾರಂಭವಾಗಲಿದೆ. ಕೊನೆಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.
ಈ ನಡುವೆ, ಇಶಾ ಫೌಂಡೇಶನ್‌ನ ವಕ್ತಾರರು ಮಂಗಳವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ನಾವು ಜನರನ್ನು ಮದುವೆಯಾಗಲು ಅಥವಾ ಸನ್ಯಾಸತ್ವ ಸ್ವೀಕರಿಸಲು ಹೇಳಿಲ್ಲ” ಎಂದಿದ್ದಾರೆ.
“ಇಶಾ ಫೌಂಡೇಶನ್ ಅನ್ನು ಯೋಗ ಮತ್ತು ಆಧ್ಯಾತ್ಮಿಕತೆಯನ್ನು ನೀಡಲು ಸದ್ಗುರುಗಳು ಸ್ಥಾಪಿಸಿದ್ದಾರೆ. ವಯಸ್ಕ ವ್ಯಕ್ತಿಗಳು ತಮ್ಮ ಮಾರ್ಗವನ್ನು ಆರಿಸಿಕೊಳ್ಳಲು ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ನಾವು ಮದುವೆಯಾಗಲು ಅಥವಾ ಸನ್ಯಾಸತ್ವ ತೆಗೆದುಕೊಳ್ಳಲು ಜನರಿಗೆ ಹೇಳಿಲ್ಲ. ಏಕೆಂದರೆ ಇವುಗಳು ಜನರ ವೈಯಕ್ತಿಕ ಆಯ್ಕೆಗಳಾಗಿವೆ. ಇಶಾ ಯೋಗ ಕೇಂದ್ರವು ಸನ್ಯಾಸಿಗಳಲ್ಲದ ಸಾವಿರಾರು ಮಂದಿ ಮತ್ತು ಬ್ರಹ್ಮಚರ್ಯ ಅಥವಾ ಸನ್ಯಾಸತ್ವ ಸ್ವೀಕರಿಸಿದ ಕೆಲವರಿಗೆ ಮನೆಯಾಗಿದೆ” ಎಂದು ಹೇಳಿದ್ದಾರೆ.
“ಸನ್ಯಾಸಿನಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಅವರು ತಮ್ಮ ಸ್ವಂತ ಇಚ್ಛೆಯಿಂದ ನಮ್ಮ ಯೋಗ ಕೇಂದ್ರದಲ್ಲಿ ಇರುವುದಾಗಿ ಹೇಳಿದ್ದಾರೆ. ಈಗ ವಿಷಯವು ನ್ಯಾಯಾಲಯದ ಮುಂದಿದೆ. ಸತ್ಯಕ್ಕೆ ಗೆಲುವಾಗಲಿದೆ ಮತ್ತು ಅನಗತ್ಯ ವಿವಾದಗಳು ಕೊನೆಗೊಳ್ಳಲಿದೆ” ಎಂದು ಇಶಾ ವಕ್ತಾರ ಸಮರ್ಥಿಸಿಕೊಂಡಿದ್ದಾರೆ.
“ಸತ್ಯಶೋಧನಾ ಸಮಿತಿಯಂತೆ ಅರ್ಜಿದಾರರು ಮತ್ತು ಇತರರು ಇಶಾ ಫೌಂಡೇಶನ್ ನಿರ್ಮಿಸುತ್ತಿರುವ ಸ್ಮಶಾನದ ಅತಿಕ್ರಮಣ ಪ್ರವೇಶಕ್ಕೆ ಪ್ರಯತ್ನಿಸಿದ್ದಾರೆ. ಬಳಿಕ, ಅವರೇ ಫೌಂಡೇಶನ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ” ಎಂದು ವಕ್ತಾರ ಹೇಳಿದ್ದಾರೆ.
ಪ್ರಸ್ತುತ ಪ್ರಕರಣ ಹೊರತು ನಮ್ಮ ಪ್ರತಿಷ್ಠಾನದ ವಿರುದ್ದ ಬೇರೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲ. ಪ್ರತಿಷ್ಠಾನದ ವಿರುದ್ಧ ಸುಳ್ಳು ಮಾಹಿತಿಯನ್ನು ಹರಡುವಲ್ಲಿ ತೊಡಗಿರುವವರ ವಿರುದ್ಧ ದೇಶದ ಕಾನೂನಿನ ಅಡಿ ಹೋರಾಡುತ್ತೇವೆ” ಎಂದಿದ್ದಾರೆ.
ಬೇರೆಯವರ ಹೆಣ್ಣು ಮಗಳು ಸನ್ಯಾನಿಸಿಯಾಗಲು ಹುರಿದುಂಬಿಸುವುದು ಏಕೆ?
“ತನ್ನ ಮಗಳಿಗೆ ಮದುವೆ ಮಾಡಿ ಸುಂದರವಾದ ಬದುಕು ಕಟ್ಟಿಕೊಟ್ಟಿರುವ ಜಗ್ಗಿ ವಾಸುದೇವ್, ಬೇರೆಯವರ ಹೆಣ್ಣು ಮಗಳು ಸನ್ಯಾಸಿನಿಯಾಗಲು ಹುರಿದುಂಬಿಸುವುದು ಏಕೆ?” ಎಂದು ಸೋಮವಾರ ಅರ್ಜಿ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ ಎಂದು ವರದಿಯಾಗಿದೆ.
ಇಶಾ ವೈದ್ಯನ ವಿರುದ್ದ 12 ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ:
ಅರ್ಜಿದಾರ ಕಾಮರಾಜ್ ಅವರು ಇಶಾ ಫೌಂಡೇಶನ್‌ನ ವೈದ್ಯನ ವಿರುದ್ದ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯದ ಮತ್ತೊಂದು ಕ್ರಿಮಿನಲ್ ಪ್ರಕರಣವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಕೊಯಮತ್ತೂರು ಜಿಲ್ಲೆಯ ಅಲಂದುರೈ ಸರ್ಕಾರಿ ಶಾಲೆಯಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ 12 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೊಯಮತ್ತೂರಿನ ಪೆರೂರ್ ಮಹಿಳಾ ಠಾಣೆ ಪೊಲೀಸರು ಸೆಪ್ಟೆಂಬರ್ 26ರಂದು ವೈದ್ಯನೊಬ್ಬನನ್ನು ಬಂಧಿಸಿದ್ದರು.
ಬಂಧಿತ ವೈದ್ಯನನ್ನು ತಿರುಪತ್ತೂರು ಜಿಲ್ಲೆಯ 33 ವರ್ಷದ ಎಸ್ ಸರವಣಮೂರ್ತಿ ಎಂದು ಗುರುತಿಸಲಾಗಿದೆ. ಇವರು ಇಶಾ ಫೌಂಡೇಶನ್ ನಿರ್ವಹಿಸುವ ಸಂಚಾರಿ ವೈದ್ಯಕೀಯ ಘಟಕಗಳ ತಂಡದ ಭಾಗವಾಗಿದ್ದರು. ಈ ಘಟಕಗಳು ತಮ್ಮ ‘ಆಕ್ಷನ್ ಫಾರ್ ರೂರಲ್ ರಿಜುವೆನೇಶನ್’ ಕಾರ್ಯಕ್ರಮದ ಅಡಿಯಲ್ಲಿ ಕೊಯಮತ್ತೂರಿನಾದ್ಯಂತ ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿತ್ತು ಎಂದು ವರದಿಯಾಗಿದೆ.