ಮಂಗಳೂರು :(ಅ.3) ಕಳೆದ 34 ವರ್ಷಗಳ ಹಿಂದೆ ಆರಂಭಗೊಂಡ ಮಂಗಳೂರು ದಸರಾ ಇದೀಗ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ರೂವಾರಿಯೂ ಆಗಿರುವ ಜನಾರ್ಧನ ಪೂಜಾರಿ ಈ ಬಾರಿಯ ದಸರಾವನ್ನು ಉದ್ಘಾಟಿಸಿದ್ದಾರೆ.
ಇದನ್ನೂ ಓದಿ: ⭕ಬಂಟ್ವಾಳ: ತಂಗಿಯನ್ನು ಕಾಲೇಜಿಗೆ ಡ್ರಾಪ್ ಮಾಡುವಾಗ ಆಕ್ಸಿಡೆಂಟ್
ಇಂದು ಮುಂಜಾನೆ 8.30 ಕ್ಕೆ ಸರಿಯಾಗಿ ಗುರು ಪ್ರಾರ್ಥನೆಯೊಂದಿಗೆ ದಸರಾ ಪೂರ್ವ ಕಾರ್ಯಕ್ರಮ ಆರಂಭಗೊಂಡಿದ್ದು, 11 ಗಂಟೆಗೆ ದರ್ಬಾರ್ ಮಂಟಪಕ್ಕೆ ಶಾರದಾ ದೇವಿಯನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಗಿದೆ.
ಬಳಿಕ ಶಾಸ್ತ್ರೋಕ್ತವಾಗಿ ಶಾರದೆ ಸಹಿತ ನವದುರ್ಗೆಯರ ಪ್ರತಿಷ್ಠಾಪನೆ ನಡೆಸಿ ದಸರಾಗೆ ಚಾಲನೆ ನೀಡಲಾಗಿದೆ.
ವಯೋ ಸಹಜವಾಗಿ ಜನಾರ್ಧನ ಪೂಜಾರಿ ಅವರು ನಡೆಯಲು ಕಷ್ಟವಾದ್ರೂ ಈ ಬಾರಿಯ ದಸರಾದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನಡೆದುಕೊಂಡೇ ದರ್ಬಾರ್ ಹಾಲ್‌ಗೆ ಬಂದ ಜನಾರ್ಧನ ಪೂಜಾರಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜನಪ್ರತಿನಿದಿಗಳು ಹಾಜರಿದ್ದು ದಸರಾ ಉದ್ಘಾಟನೆಗೆ ಸಾಕ್ಷಿಯಾಗಿದ್ದಾರೆ. ದಸರಾ ಹಿನ್ನಲೆಯಲ್ಲಿ ಅಕ್ಟೋಬರ್ 9 ರಂದು ಚಂಡಿಯಾಗ ,11 ರಂದು ಚಂಡಿಕಾ ಹೋಮ ನಡೆಯಲಿದೆ.
ದೇಶ ವಿದೇಶದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿಶೇಷವಾಗಿ ಈ ಬಾರಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತಿ ಅಮೃತ ಸೋಮೇಶ್ವರ ಅವರ ಸವಿ ನೆನಪಿಗಾಗಿ ಅಕ್ಟೋಬರ್ 4 ರಂದು ಕವಿ ಗೋಷ್ಠಿ ನಡೆಯಲಿದೆ.
ಅದೇ ರೀತಿ 6 ರಂದು ಮುಂಜಾನೆ 5 ಗಂಟೆಗೆ ಹಾಫ್ ಮ್ಯಾರಾಥಾನ್ ನಡೆಯಲಿದೆ. ದೇವಸ್ಥಾನ ಹಾಗೂ ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದ್ದು, ದಸರಾ ವೈಭವ ಕಳೆಕಟ್ಟಲಿದೆ.