ಉಡುಪಿ:(ಅ.7) “ಕನ್ನಡವು ಮೇರು ಭಾಷೆ. ಮಾತೃ ಭಾಷಿಗರಾಗಿರುವ ನಾವು ಸಂಸ್ಕೃತಿಯಲ್ಲೂ, ವ್ಯವಹಾರದಲ್ಲೂ, ಆಚಾರ-ವಿಚಾರದಲ್ಲೂ ಕನ್ನಡವನ್ನು ಬಳಸಿದಾಗ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ ” ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದರು.
ಇದನ್ನೂ ಓದಿ: 🛑ಬಿಗ್ ಬಾಸ್ ಗೆ ವಕೀಲರ ಸಂಘದಿಂದ ಖಡಕ್ ಎಚ್ಚರಿಕೆ
ಕರ್ನಾಟಕ ಸಂಭ್ರಮ-50. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮದಡಿಯಲ್ಲಿ “ಕನ್ನಡ ಜ್ಯೋತಿ ರಥ” ಇಡೀ ರಾಜ್ಯದಾದ್ಯಂತ ಸಂಚರಿಸುತ್ತಿದ್ದು ಈಗ ಉಡುಪಿ ಜಿಲ್ಲೆಗೆ ಆಗಮಿಸಿದೆ. ಕಾಪು ತಾಲೂಕಿನಲ್ಲಿ ಕನ್ನಡ ರಥವನ್ನು ಸಂಭ್ರಮ-ಸಡಗರದಿಂದ ಸ್ವಾಗತ ಮಾಡಿಕೊಳ್ಳಲಾಯಿತು.
ಶಿರ್ವ ದ ಪೇಟೆ ಬೀದಿಯಲ್ಲಿ ಮೆರವಣಿಗೆ ಏರ್ಪಡಿಸಲಾಗಿತ್ತು. ಹಲವಾರು ಕನ್ನಡಾಭಿಮಾನಿಗಳು ಕನ್ನಡ ರಥವನ್ನು ಕಣ್ತುಂಬಿಕೊಂಡರು.
ಕನ್ನಡ ರಥದ ಮೂಲಕ ಕನ್ನಡಾಭಿಮಾನವನ್ನು ಜಾಗೃತಗೊಳಿಸುವ ಕಾರ್ಯ ಕಾಪು ತಹಶಿಲ್ದಾರ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದೆ.
ಕನ್ನಡವು ಅತ್ಯಂತ ಪ್ರಾಚೀನ ಭಾಷೆ. ವೈಜ್ಞಾನಿಕ ಮತ್ತು ತಾರ್ಕಿಕ ನೆಲೆಯಲ್ಲಿ ರೂಪುಗೊಂಡಿದೆ. ಕನ್ನಡವು ಲಿಪಿಗಳ ರಾಣಿಯಾಗಿದೆ. ಕನ್ನಡಕ್ಕಾಗಿ ಕೈಯೆತ್ತಿದರೆ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ಕೊರಳೆತ್ತಿದರೆ ಕೊರಳು ಪಾಂಚಜನ್ಯವಾಗುತ್ತದೆ ಎಂದು ಕುವೆಂಪು ವರ್ಣಿಸಿದ್ದಾರೆ. ಎಂಟು ಜ್ಞಾನ ಪೀಠ ಪಡೆದು ಶ್ರೀಮಂತವಾಗಿರುವ ಕನ್ನಡವು ನಮ್ಮ ಬದುಕಿನ ಗುರುತಾಗಬೇಕು. ಸಾಹಿತ್ಯ ವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಬೇಕು. ಕನ್ನಡವು ಮೃತ ಭಾಷೆಯಾಗದೆ ಅಮೃತ ಭಾಷೆಯಾಗಬೇಕೆಂದರೆ ನಾವೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಂಡು ಕನ್ನಡವನ್ನು ಔನ್ನತ್ಯಕ್ಕೆ ಏರಿಸಬೇಕು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಭಂಡಾರಿಯವರು ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಕನ್ನಡವು ವ್ಯಾವಹಾರಿಕ ಭಾಷೆಯಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಕಾಪು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಮರಾಠೆ, ಕಾರ್ಯದರ್ಶಿ ಪಾಟ್ಕರ್ ಮುಂತಾದವರು ಭಾಗವಹಿಸಿದ್ದರು.
ಕಾಪು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ತಹಶಿಲ್ದಾರ್ ಕಚೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಅರುಣ್ ಶ್ವೇತಾ ಸಂಪ್ರೀತ್ ಸಂತೋಷ್ ಮತ್ತಿತರರು ಭಾಗವಹಿಸಿದ್ದರು.