ಮಂಗಳೂರು:(ಅ.8) ಉದ್ಯಮಿ ಮುಮ್ತಾಝ್ ಅಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಮಂಗಳೂರು ಪೊಲೀಸರು ಎ1 ಆರೋಪಿ ರೆಹಮತ್ ಸೇರಿ ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ⭕ಮಂಗಳೂರು: ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ
ಮುಮ್ತಾಝ್ ಅಲಿ ಸಾವು ಪ್ರಕರಣಕ್ಕೆ ಸಂಬಂಧಿಸಿ A1 ಆರೋಪಿ ಸುರತ್ಕಲ್ ಕೃಷ್ಣಾಪುರ 7 ನೇ ಬ್ಲಾಕ್ ನಿವಾಸಿ ರೆಹಮತ್, ಆಕೆಯ ಪತಿ A5 ಆರೋಪಿ ಶೊಹೇಬ್ ಹಾಗೂ ಆರೋಪಿ ಸತ್ತಾರ್ ಎಂಬವರ ಕಾರು ಚಾಲಕ ಎ 6 ಆರೋಪಿ ಸಿರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ. ರೆಹಮತ್ ಮತ್ತು ಆಕೆಯ ಪತಿ ಶೊಹೇಬ್ ನನ್ನು ಸೋಮವಾರ ಸಂಜೆ ಕೇರಳದಲ್ಲಿ ವಶಕ್ಕೆ ಪಡೆದಿದ್ದು, ಸಿರಾಜ್ ನನ್ನು ಕೃಷ್ಣಾಪುರದ ಆತನ ಮನೆಯಿಂದಲೇ ಸಿಸಿಬಿ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಉದ್ಯಮಿ ಮುಮ್ತಾಝ್ ಅಲಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಮಮ್ತಾಝ್ ಅಲಿ ಅವರ ಸಹೋದರ ಹೈದರ್ ಅಲಿ ಎಂಬವರು ರೆಹಮತ್, ಅಬ್ದುಲ್ ಸತ್ತಾರ್, ಕಲಂದರ್ ಶಾಫಿ, ಮುಸ್ತಫಾ, ಶುಐಬ್, ಸಿರಾಜ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು.
ಅವರ ದೂರು ಆಧರಿಸಿ ಐಪಿಸಿ 308(2), 308(5), 352, 351(2) 190 ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಪ್ರಕರದಲ್ಲಿನ ಪ್ರಮುಖ A1 ಆರೋಪಿ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.