Wed. Nov 20th, 2024

Ujire: SDM ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸ್ಪಟಿಕ ಸಂಘದ ವತಿಯಿಂದ “ಕ್ರೆಸಿಟಾ ಫೆಸ್ಟ್”

ಉಜಿರೆ (ಅ.11): “ವಿಧ್ಯಾರ್ಥಿಗಳಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ , ಆಗ ಮಾತ್ರ ನೀವು ನಿಮ್ಮನ್ನ ಹೆಚ್ಚು ತಿಳಿದುಕೊಳ್ಳಬಹುದು. ಕ್ರೆಸಿಟಾದಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ಬೆಳವಣಿಗೆ ಜೊತೆಗೆ , ತರಗತಿಯಲ್ಲಿ ಓದಿ ಕಲಿಯುವುದಕ್ಕಿಂತ ಹೆಚ್ಚಿನ ವಿಷಯಗಳನ್ನು ಕಲಿಯಲು ಮುಕ್ತ ಅವಕಾಶ ದೊರಕುತ್ತದೆ” ಎಂದು ಎಸ್.ಡಿ.ಎಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆ ಇಲ್ಲಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಸಹ ಪ್ರಾಧ್ಯಾಪಕ ಡಾ.ರವೀಶ್ ಪಡುಮಲೆ ಹೇಳಿದರು.

ಇದನ್ನೂ ಓದಿ: 💥ರತನ್‌ ಟಾಟಾ ನಿಧನದ ನಂತರ ಟ್ರಸ್ಟ್‌ ಗೆ ಹೊಸ ಸಾರಥಿಯ ನೇಮಕ


ಎಸ್.ಡಿ.ಎಮ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಸ್ಪಟಿಕ ಸಂಘದ ವತಿಯಿಂದ ಆಯೋಜಿಸಿದ್ದ ಕ್ರೆಸಿಟಾ ಫೆಸ್ಟ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, “ಈಗಿನ ವಿದ್ಯಾರ್ಥಿಗಳು ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ , ತಂದೆ ತಾಯಿ ಮತ್ತು ಗುರುಗಳ ಮಾರ್ಗದರ್ಶನದೊಂದಿಗೆ ಅವರನ್ನು ಗೌರವಿಸಬೇಕು. ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಇತರರಿಗೆ ಸ್ಪೂರ್ತಿದಾಯಕವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ ಕುಮಾರ ಹೆಗ್ಡೆ, “ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳುವುದು ಅತ್ಯಗತ್ಯ. ಗುರಿಯನ್ನು ಸಾಧಿಸುವುದು ಸುಲಭದ ಮಾತಲ್ಲ , ನಾವು ಕೆಲವೊಂದು ವಿಶೇಷ ಅರ್ಹತೆ ಮತ್ತು ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಕ್ರೆಸಿಟಾದಂತಹ ಫೆಸ್ಟ್ ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿ ಮತ್ತು ದೌರ್ಬಲ್ಯ ಹಾಗೂ ಹಲವಾರು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶ ಒದಗಿಸುತ್ತದೆ. ನಮ್ಮಲ್ಲಿ ಒಂದೊಳ್ಳೆ ಮಾತಿದೆ ‘ನಿನ್ನನ್ನು ನೀನು ತಿದ್ದಿಕೊಂಡ್ರೆ ಜಗತ್ತಿನಲ್ಲಿ ಒಬ್ಬ ಮೂರ್ಖ ಕಮ್ಮಿಯಾಗ್ತಾನೆ ‘ ಪ್ರತಿಯೊಬ್ಬರು ಈ ಮಾತಿನ ರೀತಿಯಲ್ಲಿ ಯೋಚನೆ ಮಾಡಿದರೆ ಒಂದೊಳ್ಳೆ ಸಮಾಜ ನಿರ್ಮಾಣ ಮಾಡಬಹುದು ಹಾಗೂ ನಮ್ಮಲ್ಲಿನ ಕೊರತೆಗಳನ್ನು ಬಲವಾಗಿ ಪರಿವರ್ತಿಸಿಕೊಂಡಾಗ ನಮ್ಮ ವೈಯಕ್ತಿಕ ಬೆಳವಣಿಗೆ ಕೂಡ ಸಾಧ್ಯ ” ಎಂದರು.


ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ , ಕಾರ್ಯಕ್ರಮದ ವಿದ್ಯಾರ್ಥಿ ಪ್ರತಿನಿಧಿ ಜಿ. ವಿ.ಚಂದನ ಸೇರಿದಂತೆ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಿಂಧು ನಿರೂಪಿಸಿ , ವೈದೇಹಿ ಮತ್ತು ಪೂರ್ವಿ ಪ್ರಾರ್ಥಿಸಿದರು. ಚಂದ್ರಿಕಾ ಸ್ವಾಗತಿಸಿ , ಜಿ. ವಿ ಚಂದನ ವಂದಿಸಿದರು.

Leave a Reply

Your email address will not be published. Required fields are marked *