ಮೈಸೂರು ದಸರಾ 2024: (ಅ.12) ಇಂದು ವಿಜಯದಶಮಿ ನಿಮಿತ್ತ ಅರಮನೆ ನಗರಿ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750 ಕೆಜಿ ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಆನೆ ರಾಜ ಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಸಾಗುತ್ತಾನೆ.
ಇದನ್ನೂ ಓದಿ : ⭕ಉಜಿರೆ: ಅತ್ತಾಜೆ ಆದಿತ್ಯ ಭಟ್ ಹೃದಯಾಘಾತದಿಂದ ನಿಧನ
ಬೆಳಗ್ಗೆ 8ಕ್ಕೆ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಅರಮನೆಗೆ ಆಗಮಿಸುತ್ತದೆ. ನಂತರ 10.15ಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉತ್ತರ ಪೂಜೆ ಮಾಡಲಿದ್ದಾರೆ.
ಈ ವೇಳೆ ಅರಮನೆಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಸವಾರಿ ತೊಟ್ಟಿಗೆ ಆಗಮಿಸಲಿವೆ. ಬಳಿಕ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ 10.45ರಿಂದ ಬೆಳಗ್ಗೆ 11 ರೊಳಗೆ ಜಟ್ಟಿ ಕಾಳಗ ನಡೆಯುತ್ತದೆ.
ನಂತರ 11.20 ರಿಂದ 11.45ರವರೆಗೆ ಅರಮನೆ ಅಂಗಳದ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ಸಾಗುತ್ತದೆ. ಇಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬನ್ನಿಪೂಜೆ ನೆರವೇರಿಸುತ್ತಾರೆ. ನಂತರ ಅರಮನೆಗೆ ಆಗಮಿಸಿ ಕಂಕಣ ವಿಸರ್ಜನೆ ಮಾಡುತ್ತಾರೆ.
ಮಧ್ಯಾಹ್ನ ಶುಭ ಮಕರ ಲಗ್ನದಲ್ಲಿ 1.41ರಿಂದ 2.10ರ ನಡುವೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ.
ಬಳಿಕ ಸಂಜೆ ಕುಂಭ ಲಗ್ನ 4 ರಿಂದ 4.30ರ ನಡುವೆ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.