ಉಡುಪಿ:(ಅ.16) ಮುಳುಗುತಜ್ಞ, ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ ಅವರ ಇಬ್ಬರು ಮಕ್ಕಳ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಾಗಿ ಕೇರಳ ರಾಜ್ಯದ ಸಂಘ, ಸಂಸ್ಥೆಯವರು ಮುಂದೆ ಬಂದಿದ್ದು, ಕೇರಳದ ಕೋಝಿಕ್ಕೋಡ್‌ನ ಮಲ್ಟಿ ಸ್ಪೆಷಾಲಿಟಿ ಮೈತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: ⭕ಮಂಗಳೂರು : ತಲೆಗೆ ಕಲ್ಲು ಎತ್ತಿ ಬಸ್ ನಿರ್ವಾಹಕನ ಭೀಕರ ಕೊಲೆ!!
ಈಶ್ವರ್ ಮಲ್ಪೆ ಅವರ ಇಬ್ಬರು ಮಕ್ಕಳಾದ ಕಾರ್ತಿಕ್ (23), ಬ್ರಾಹ್ಮಿ (7) ಅನಾರೋಗ್ಯ ಪೀಡಿತರಾಗಿದ್ದು, ವೈದ್ಯಕೀಯ ಚಿಕಿತ್ಸೆಗಳಿಗೆ ಲಕ್ಷಾಂತರ ರೂ. ವ್ಯಯಿಸಬೇಕಿದೆ.
ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ಅರ್ಜುನ್ ಮೃತ ದೇಹವನ್ನು ಪತ್ತೆ ಮಾಡಲು ಈಶ್ವರ್ ಮಲ್ಪೆ ತಂಡ ಮಹತ್ವದ ಪಾತ್ರ ವಹಿಸಿದ್ದರು. ಇದರಿಂದಾಗಿ ಇವರ ಬಗ್ಗೆ ಕೇರಳದಲ್ಲಿ ಅಭಿಮಾನ ಹೆಚ್ಚಾಗಿದ್ದು, ಕುಟುಂಬದ ಸಮಸ್ಯೆಯರಿತ ಅಲ್ಲಿನ ಸಂಘ ಸಂಸ್ಥೆಯವರು ಒಟ್ಟಾಗಿ ಕುಟುಂಬವನ್ನು ಕರೆಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುವ ನಂಬಿಕೆ ಹೊಂದಿದ್ದೇವೆ. ಎಷ್ಟೇ ಖರ್ಚಾದರೂ ನಾವು ಭರಿಸುತ್ತೇವೆ ಎಂದು ಅಲ್ಲಿನ ಸಂಘ ಸಂಸ್ಥೆಯವರು ಅಭಿಮಾನ ತೋರಿದ್ದಾರೆ ಎಂದು ಈಶ್ವರ್ ತಿಳಿಸಿದ್ದಾರೆ.
ಉಡುಪಿ ಸಹಿತ ಕರಾವಳಿಯ ಸಂಘ ಸಂಸ್ಥೆಯವರು, ಸಾರ್ವಜನಿಕರು ಸಾಕಷ್ಟು ಸಹಕಾರ ನೀಡಿದ್ದಾರೆ. ಆದರೆ ಸರಕಾರದಿಂದ ಸಹಾಯ ದೊರೆತಿಲ್ಲ. ಮಕ್ಕಳ ಚಿಕಿತ್ಸೆಗಾಗಿ ಸದ್ಯಕ್ಕೆ ಕೇರಳದಲ್ಲಿದ್ದೇನೆ ಎಂದು ಈಶ್ವರ್ ತಿಳಿಸಿದ್ದಾರೆ.