ಮಡಂತ್ಯಾರು : (ಅ.19)ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಹಾಗೂ ಉಜಿರೆಯ ಉದ್ಯಮಿ ಕೆ. ಮೋಹನ್ ಕುಮಾರ್ ಅವರಿಗೆ ಜೆಸಿಐ ಮಡಂತ್ಯಾರು ವಲಯದಿಂದ “ಜೆಸಿಐ ಸಪ್ತಾಹ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಜೆಸಿಐ ಮಡಂತ್ಯಾರು ವಲಯದಿಂದ ಆಯೋಜಿಸಿದ್ದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಅವರಿಗೆ ಗೌರವಾರ್ಪಣೆಯನ್ನು ಜೆಸಿಐ ಅಧ್ಯಕ್ಷ ವಿಕೇಶ್ ಮಾನ್ಯ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಇತರ ಅತಿಥಿಗಳು ನೆರವೇರಿಸಿದರು.
ಗೌರವಾರ್ಪಣೆಗೂ ಮೊದಲು ಮೋಹನ್ ಕುಮಾರ್ ಅವರಿಗೆ ಅದ್ದೂರಿ ಸ್ವಾಗತವನ್ನು ಜೆಸಿಐ ಸದಸ್ಯರುಗಳು ನೀಡಿ ವೇದಿಕೆಗೆ ಆಹ್ವಾನಿಸಿದರು.
ಬದುಕು ಕಟ್ಟೋಣ ಬನ್ನಿ ತಂಡದ ಮೂಲಕ ಬೆಳ್ತಂಗಡಿ ತಾಲೂಕಿನ ಕೊಳಂಬೆಯ ಜನರ ಜೀವನವನ್ನು ಕಟ್ಟಿ ಕೊಡುವ ಕೆಲಸವನ್ನು ಮೋಹನ್ ಕುಮಾರ್ ಅವರು ಮಾಡಿದ್ದರು. ಅಲ್ಲದೇ ಶಾಲೆಗಳ ಅಭಿವೃದ್ದಿಯಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು.
ಹೀಗಾಗಿ ಇವರಿಗೆ ವಿಜಯ ರತ್ನ ಪ್ರಶಸ್ತಿ ಪುರಸ್ಕೃತ, ಸಮಾಜ ರತ್ನ, ಸಾಧನಾ ಶ್ರೀ 2022, ಅತ್ಯುತ್ತಮ ಯುವ ಉದ್ಯಮಿ, ಮಹಾತ್ಮ ಗಾಂಧಿ ಸದ್ಭಾವನಾ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ದೊರಕಿದೆ.
“ನನ್ನ ಜೀವನದ ಅತ್ಯದ್ಭುತ ಕ್ಷಣ” : ಮೋಹನ್ ಕುಮಾರ್
ಜೆಸಿಐ ಮಡಂತ್ಯಾರು ವಲಯದಿಂದ ನನ್ನನ್ನು ಗೌರವಿಸಿದ್ದೀರಿ. ಇದು ನನ್ನ ಜೀವನದ ಅತ್ಯದ್ಭುತ ಕ್ಷಣ ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್ ಅವರು ಹೇಳಿದರು.
ಗೌರವದ ಬಳಿಕ ಮಾತನಾಡಿದ ಅವರು, ಮೋಹನ್ ಆಳ್ವ ಅವರು ನನಗೆ ಯಾವಾಗಲೂ ಆದರ್ಶ ವ್ಯಕ್ತಿ. ಸಮಾಜದಲ್ಲಿ ಇನ್ನಷ್ಟು ಸೇವೆ ಮಾಡಬೇಕಿದ್ದರೆ, ಮನಸ್ಸಿನಲ್ಲಿ ಆದರ್ಶ ವ್ಯಕ್ತಿ ಇರಬೇಕು. ಇವರಿಂದಲೇ ನನಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಸ್ಪೂರ್ತಿ ಎಂದು ಮೋಹನ್ ಕುಮಾರ್ ಹೇಳಿದರು.