Wed. Nov 20th, 2024

Puttur: ಬಿಲ್ಲವ ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ – ಮಧ್ಯಾಹ್ನ ಬಂಧನಕ್ಕೆ ಒಳಗಾಗಿದ್ದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಸಂಜೆ ಬಿಡುಗಡೆ!!

ಪುತ್ತೂರು:(ಅ.19) ಬಿಲ್ಲವ ಹೆಣ್ಣು ಮಕ್ಕಳನ್ನು ಹಾಗೂ ಭಜನೆ ಸಂಕೀರ್ತನೆ ಮಾಡುವವರನ್ನು ನಿಂದಿಸಿರುವ ಆರೋಪದಡಿ ಮಧ್ಯಾಹ್ನ ಬಂಧಿತರಾಗಿದ್ದ ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರಿಗೆ ನಿನ್ನೆ ಸಂಜೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: ⭕ಗುಂಡ್ಯ: ಮಗನ ಬರ್ತ್ ಡೇ ಪಾರ್ಟಿಗಾಗಿ ಕಡವೆ ಹತ್ಯೆ

ಮೂರು ದಿನಗಳ ಹಿಂದೆ ಸಂಜೀವ ಪೂಜಾರಿಯವರು ಕೇರಳ ರಾಜ್ಯದ ಮಂಜೇಶ್ವರದ ವ್ಯಕ್ತಿಯೊಬ್ಬರ ಜತೆ ಮಾತಾಡಿದರೆನ್ನಲಾದ ಫೋನ್ ಸಂಭಾಷಣೆಯ ಆಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಆಡಿಯೋದಲ್ಲಿ ಸಂಜೀವ ಪೂಜಾರಿಯವರು ಬಿಲ್ಲವ ಸಮುದಾಯದ ಮಹಿಳೆಯರನ್ನು ಹಾಗೂ ಭಜನ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡಿರುವ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ದ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಹಿಂದು ಜಾಗರಣಾ ವೇದಿಕೆಯ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಎಂಬವರು ಬೆಳ್ಳಾರೆ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು . ದೂರು ಸ್ವೀಕರಿಸಿದ ಪೊಲೀಸರು ಎರಡು ದಿನದ ಬಳಿಕ ಗುರುವಾರ ಸಂಜೆ ಪ್ರಕರಣ ದಾಖಲಿಸಿದ್ದರು.

ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಪುತ್ತೂರು ಡಿವೈಎಸ್ಪಿ ಕಛೇರಿ ಮುಂಭಾಗ, ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಸಂಘ ಪರಿವಾರದ ಅಂಗ ಸಂಸ್ಥೆಗಳು ಪ್ರತಿಭಟನೆ ನಡೆಸಿತ್ತು. ಅಲ್ಲದೇ ತಕ್ಷಣ ಬಂಧಿಸಬೇಕು ಎಂದು ಅಗ್ರಹಿಸಿ ಡಿವೈಎಸ್ಪಿ ಕಛೇರಿ ಮುಂಭಾಗ ಭಜನೆ ಹಾಡುವ ಮೂಲಕ ಪ್ರತಿಭಟನಕಾರರು ಧರಣಿ ಸತ್ಯಾಗ್ರಹ ಕೂಡ ನಡೆಸಿದ್ದರು.

ಇದಾದ ಕೆಲವೇ ಗಂಟೆಗಳ ಬಳಿಕ ಕಾಣಿಯೂರಿನ ನಿವಾಸದಿಂದ ಬೆಳ್ಳಾರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಸಂಜೀವ ಪೂಜಾರಿಯವರನ್ನು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ವೇಳೆ ಅವರಿಗೆ ಸುಳ್ಯದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *