ಉಡುಪಿ :(ಅ.22) ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಕತ್ತು ಸೀಳಿ ಕೊಲೆಗೈದ ಘಟನೆ ಉಡುಪಿ ಹಳೆ ಕೆಎಸ್ಸಾರ್ಟಿಸಿ ನಿಲ್ದಾಣದ ಬಳಿಯ ಕೃಷ್ಣ ಕೃಪಾ ಬಿಲ್ಡಿಂಗ್ ನ ನೆಲ ಅಂತಸ್ತಿನ ಕೊಠಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇದನ್ನೂ ಓದಿ: 🟠ಉಜಿರೆಯ ಅಮೃತ್ ಸಿಲ್ಕ್ಸ್ ನಲ್ಲಿ ವಿಜಯವಾಣಿಯ ಅದೃಷ್ಟದ ಲಕ್ಕಿ ಡ್ರಾ ಕೂಪನ್ ಬಿಡುಗಡೆ
ಕೊರಂಗ್ರಪಾಡಿಯ ಪ್ರಶಾಂತ್ ಶೆಟ್ಟಿ(32) ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ್ ಕೊಲೆ ಆರೋಪಿ.
ವಿಪರೀತ ಮದ್ಯಪಾನ ಮಾಡಿದ್ದರೆನ್ನಲಾದ ಇವರಿಬ್ಬರು ಜಗಳ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿ ಈರಣ್ಣ ಹರಿತವಾದ ಚೂರಿಯಿಂದ ಪ್ರಶಾಂತ್ ಕತ್ತು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯ ಎಸಗಿದ ಬಳಿಕ ಆರೋಪಿಯು ಖುದ್ದು ಪೊಲೀಸರಿಗೆ ಕರೆ ಮಾಡಿ, ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕೆ., ಎಎಸ್ಪಿ ಸಿದ್ದಲಿಂಗಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ್ದಾರೆ. ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ನಡೆದಂತೆ ಕಂಡುಬಂದರೂ ಬೇರೆ ಏನಾದರೂ ಕಾರಣ ಇದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.