ಧಾರವಾಡ:(ಅ.23) ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ರಾಜ್ಯ ಮಟ್ಟದ ಸಮಾಲೋಚನಾ ಸಭೆ ಧಾರವಾಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಡಾ. ದೇವಿ ಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದನ್ನೂ ಓದಿ: ⭕ಮಂಗಳೂರು: ಬಡಾ ದೋಸ್ತ್ ವಾಹನದಲ್ಲಿ ನಿರಂತರ ತಾಂತ್ರಿಕ ದೋಷ
ಇತ್ತೀಚೆಗೆ ಗ್ರಾಮ ಪಂಚಾಯತಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಗ್ರಾಮ ಪಂಚಾಯತ್ ನೌಕರರಿಗೆ ವೇತನ ಶ್ರೇಣಿ ನಿಗದಿಪಡಿಸಬೇಕು, ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡಬೇಕು, ನೌಕರರಿಗೆ ಮತ್ತು ನೌಕರರ ಅವಲಂಬಿತರಿಗೆ ಅರೋಗ್ಯ ಭದ್ರತೆ ಒದಗಿಸ ಬೇಕು, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು, ಎಂದು ಸಭೆಯಲ್ಲಿ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮಾತನಾಡಿ , ಗ್ರಾಮ ಪಂಚಾಯತಿ ನೌಕರರ ಸಮಸ್ಯೆಗೆ ನೌಕರರೇ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ತಿಳಿಸಿದರು. ಸಂಘದಿಂದ ಈಗಾಗಲೇ ನವೆಂಬರ್ ತಿಂಗಳಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತಿ ನೌಕರರ ಹೋರಾಟದ ಬಗ್ಗೆ ಕರೆ ನೀಡಲಾಗಿದ್ದು, ತಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆಯುವ ಬಗ್ಗೆ ರಾಜ್ಯದ ಎಲ್ಲಾ ಹಂತದ ನೌಕರರು ಒಟ್ಟಾಗಿ ಹೋರಾಟವನ್ನು ಯಶಸ್ವಿಯಾಗಿ ನಡೆಸಿಕೊಡುವ ಬಗ್ಗೆ ಚರ್ಚಿಸಲಾಯಿತು.
ಜಿಲ್ಲೆಯ ನೌಕರರ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘಟನೆಯನ್ನು ರಚಿಸಲಾಯಿತು. ಶ್ರೇಯೋಭಿವೃದ್ಧಿ ಸಂಘದ ಧ್ಯೇಯೋದ್ದೇಶವನ್ನು ಒಪ್ಪಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಯಿತು. ಧಾರವಾಡ ಜಿಲ್ಲಾಧ್ಯಕ್ಷರಾಗಿ ಶ್ರೀ ಕಿರಣ್ ಕಲ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಗೋವಿಂದ ಮಡಿವಾಳರ, ಜಿಲ್ಲಾ ಉಪಾಧ್ಯಕ್ಷರಾಗಿ, ಬೂದಪ್ಪ ವಾಲಿಕರ್, ಕರವೀರಪ್ಪ ಬೆನ್ನಿ, ವಿನೋದ್ ಕರಗೂರು, ರವಿಬೆಂಗೇರಿ, ಚೇತನ್ ಮಟ್ಟೂರು, ನಾಗರಾಜ್ ನೆರೆಗಲ್, ಸಂಘಟನಾ ಕಾರ್ಯದರ್ಶಿಯಾಗಿ ಬೀರಪ್ಪ ಮೊರಬದ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ವಿಜಯಲಕ್ಷ್ಮಿ ರೆಡ್ಡಿಯರ್, ಇವರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ರಾಜ್ಯ ಸಂಚಾಲಕರಾದ ಸತೀಶ್ ನಾರಾವಿ, ಅಶೋಕ್ ಬಡಿಗೇರ ಬೆಳಗಾಂ, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಹೇಮಚಂದ್ರ ನಂದಳಿಕೆ, ಹಾವೇರಿ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಮಿಲ್ಲಿ, ಹಾವೇರಿ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲೇಶಪ್ಪ, ಧಾರವಾಡ ಜಿಲ್ಲೆಯ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಪಂಪು ಆಪರೇಟರ್, ಸ್ವಚ್ಚತೆಗಾರರು, ಅಟೆಂಡರ್ ಭಾರಿ ಸಂಖ್ಯೆಯಲ್ಲಿ ನೌಕರರು ಹಾಜರಾಗಿ ಉಪಸ್ಥಿತರಿದ್ದರು.