ಹಾಸನ:(ಅ.23) ಹಾಸನಾಂಬ ದೇಗುಲದ ಬಾಗಿಲನ್ನು ಮಧ್ಯಾಹ್ನ 12 ಗಂಟೆಗೆ ಗುರುವಾರದಂದು ತೆರೆಯಲಾಗುತ್ತಿದ್ದು, ನವೆಂಬರ್ 3ರವರೆಗೂ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಕಳೆದ ಬಾರಿ 14 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು.
ಇದನ್ನೂ ಓದಿ: ⭕ಚಿತ್ರದುರ್ಗ: ಆಸ್ಪತ್ರೆಯ ಕಟ್ಟಡ ಮೇಲಿಂದ ಬಿದ್ದು ನರ್ಸ್ ಸಾವು!!
ಈ ವರ್ಷ ಸುಮಾರು 20 ರಿಂದ 25 ಲಕ್ಷ ಭಕ್ತರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದ್ದು ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ದೇಗುಲವನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದ್ದು, ದೇಗುಲದ ಆವರಣದಲ್ಲಿ ಭಕ್ತರ ದರ್ಶನಕ್ಕಾಗಿ ಸರತಿ ಸಾಲುಗಳ ಬ್ಯಾರಿಕೇಡ್, ಸಾಂಪ್ರದಾಯಿಕ ಮಾದರಿಯ ಮಾಡೆಲ್‌ಗಳು, ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿದೆ.
ಹಾಸನಾಂಬೆ ಉತ್ಸವದಲ್ಲಿ ಈ ವರ್ಷ ದಸರಾ ಮಾದರಿಯ ದೀಪಾಲಂಕಾರ, ಇದೇ ಮೊದಲಬಾರಿಗೆ ಫಲಪುಷ್ಪ ಪ್ರದರ್ಶನ, ಹಾಟ್ ಏರ್ ಬಲೂನ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಲೈಟಿಂಗ್ ವೀಕ್ಷಣೆಗೆ ಡಬಲ್ ಡೆಕ್ಕರ್ ಬಸ್ ಇರಲಿದೆ. ಕಳೆದ ವರ್ಷ ಆದ ಕೆಲ ಲೋಪಗಳನ್ನು ಸರಿಪಡಿಸಿಕೊಂಡು, ಈ ವರ್ಷ ಅದ್ಧೂರಿ ಹಬ್ಬ ಆಚರಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಹಾಸನಾಂಬ ಆ್ಯಪ್, ದರ್ಶನಕ್ಕೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಸೇರಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ನಾಡಿನ ಮೂಲೆ ಮೂಲೆಯಿಂದ ಬರುವ ಭಕ್ತರಿಗಾಗಿ ಸಕಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.