ಉಜಿರೆ:(ಅ.26) ವಿಜ್ಞಾನ, ತಂತ್ರಜ್ಞಾನ, ಮಾನವಿಕ ಸೇರಿದಂತೆ ವಿವಿಧ ಜ್ಞಾನಶಿಸ್ತುಗಳಿಗೆ ಸಂಬಂಧಿಸಿದ ಆಳವಾದ ಜ್ಞಾನ ಆಧಾರಿತ ತಾರ್ಕಿಕ ಚಿಂತನೆಯ ಬಲದಲ್ಲಿ ದೇಶದ ರಚನಾತ್ಮಕ ಬೆಳವಣಿಗೆಯ ಸಂಪನ್ಮೂಲಗಳಾಗಿ ರೂಪುಗೊಳ್ಳುವುದರ ಕಡೆಗೆ ವಿದ್ಯಾರ್ಥಿ ಸಮೂಹ ಗಮನ
ಕೇಂದ್ರೀಕರಿಸಬೇಕು ಎಂದು ಎಸ್.ಡಿ ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ
ಅಭಿಪ್ರಾಯಪಟ್ಟರು.
ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ ಕಾಲೇಜು ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಮತ್ತು ರ್ಯಾಂಕ್
ಮನ್ನಣೆಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲು ಶನಿವಾರ ಆಯೋಜಿತವಾಗಿದ್ದ ಘಟಿಕೋತ್ಸವ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದದರು.
ಪದವೀಧರರಾದ ತಕ್ಷಣ ಕಲಿಕೆಯ ಯಾನ ನಿಲ್ಲುವುದಿಲ್ಲ. ಕಲಿಕೆಯ ಶ್ರದ್ಧೆ ಮತ್ತು ಜ್ಞಾನಾರ್ಜನೆಯ ಹೆಜ್ಜೆಗಳು ನಿರಂತರವಾಗಿರುತ್ತವೆ.
ಇದನ್ನು ಅರ್ಥೈಸಿಕೊಂಡು ವಿವಿಧ ಕ್ಷೇತ್ರಗಳ ಕುರಿತು ವಿಸ್ತೃತ ಜ್ಞಾನ ಪಡೆದು ದೇಶಕ್ಕೆ ಬೇಕಾದ ರಚನಾತ್ಮಕ ಮೌಲಿಕ ಸಂಪನ್ಮೂಲಗಳಾಗಿ
ಯುವಸಮೂಹ ರೂಪುಗೊಳ್ಳಬೇಕು. ಹಾಗಾದಾಗ ಮಾತ್ರ ದೇಶದ ಪ್ರಗತಿಯ ಹೆಜ್ಜೆಗಳಿಗೆ ವೇಗ ದಕ್ಕುತ್ತದೆ ಎಂದರು.
ಹಿಂದಿನ ಶಿಕ್ಷಣ ವ್ಯವಸ್ಥೆಗೆ ಹೋಲಿಸಿದರೆ ಇದೀಗ ಕಲಿಕೆಯ ಸಾಧ್ಯತೆಗಳು ವಿಸ್ತೃತವಾಗಿವೆ. ತಂತ್ರಜ್ಞಾನ ಕಲಿಕೆಗೆ ಹೊಸ ಆಯಾಮವನ್ನು
ಒದಗಿಸಿಕೊಟ್ಟಿದೆ. ಈ ಬಗೆಯ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವ್ಯಕ್ತಿಗತ ಬೆಳವಣಿಗೆಗೆ ಆದ್ಯತೆ ನೀಡಬೇಕು. ಆ ಮೂಲಕ
ರಾಷ್ಟ್ರೀಯ ಪ್ರಗತಿಯ ನವಮನ್ವಂತರ ಸೃಷ್ಟಿಸಬೇಕು. ಆ ಮೂಲಕ ಪ್ರತಿಷ್ಠಿತ ಸಾಧನೆಯ ಮನ್ನಣೆ ಸಾಧ್ಯವಾಗಿಸಿಕೊಳ್ಳಬೇಕು ಎಂದು
ಸಲಹೆ ನೀಡಿದರು.
ಘಟಿಕೋತ್ಸವ ಭಾಷಣ ಪ್ರಸ್ತುತಪಡಿಸಿದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಅವರು
ಮುಂದಿನ ಮೂರು ದಶಕಗಳ ಅವಧಿಯಲ್ಲಿ ಕೌಶಲ್ಯಾಧಾರಿತ ಶೈಕ್ಷಣಿಕ ಮತ್ತು ಬೌದ್ಧಿಕ ಸಾಮರ್ಥ್ಯವೇ ನಿರ್ಣಾಯಕವಾಗಲಿದೆ ಎಂದರು.
ಕೌಶಲ್ಯಾಧಾರಿತ ಶೈಕ್ಷಣಿಕ ಮತ್ತು ಬೌದ್ಧಿಕ ಸಾಮರ್ಥ್ಯದೊಂದಿಗೆ ವೃತ್ತಿಪರ ಅವಕಾಶಗಳನ್ನು ಪಡೆದು ಆ ಮೂಲಕ ಅಭಿವೃದ್ಧಿಯ
ಹೆಜ್ಜೆಗಳಿಗೆ ಸಮಗ್ರತೆಯ ಸ್ಪರ್ಶ ನೀಡುವುದರ ಕಡೆಗೆ ಪದವೀಧರ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.
ತಂತ್ರಜ್ಞಾನವು ಅಭಿವೃದ್ಧಿಗೊಂಡ ತಕ್ಷಣವೇ ವಾಣಿಜ್ಯೀಕೃತಗೊಳ್ಳಬಾರದು. ಶಾಶ್ವತವಾದ ಸಾಮಾಜಿಕ ಸದುಪಯೋಗ ಒದಗಿಸಿಕೊಡುವ
ನಿಟ್ಟಿನಲ್ಲಿ ಹೆಚ್ಚು ಸಂಶೋಧನೆ ನಡೆಯಬೇಕು. ತದನಂತರದ ದಿನಗಳಲ್ಲಿ ವಾಣಿಜ್ಯಿಕ ಪ್ರಯೋಜನಕ್ಕೆ ತಂತ್ರಜ್ಞಾನವನ್ನು
ಅನ್ವಯಿಸಬೇಕು. ಅದಕ್ಕಿಂತ ಮುಂಚೆ ಬೌದ್ಧಿಕ, ಶೈಕ್ಷಣಿಕ ಸಾಮರ್ಥ್ಯದ ಆಧಾರದ ಕೌಶಲ್ಯಯುತ ಸೂತ್ರಗಳನ್ನು ಅನ್ವಯಿಸಿ ಸಾಮಾಜಿಕ
ಪ್ರಯೋಜನಕ್ಕೆ ಹೆಚ್ಚು ಒತ್ತು ನೀಡಬೇಕು. ಹಾಗಾದಾಗ ಮಾತ್ರ ವಿಜ್ಞಾನ, ತಂತ್ರಜ್ಞಾನವು ಸಮಾಜಪರವಾಗುವುದಕ್ಕೆ ಸಾಧ್ಯ ಎಂದರು.
ಪದವೀಧರರು ಮತ್ತು ರ್ಯಾಂಕ್ ಮನ್ನಣೆ ಪಡೆದ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಮಂಗಳೂರು ವಿಶ್ವವಿದ್ಯಾಲಯದ
ಕುಲಪತಿಗಳಾದ ಪ್ರೊ.ಪಿ.ಎಲ್ ಧರ್ಮ ಅವರು ಪದವೀಧರರೆಲ್ಲರೂ ವಿದೇಶಕ್ಕೆ ಹೋಗುವ ಬದಲು ಭಾರತದಲ್ಲಿಯೇ ಉಳಿದುಕೊಂಡು
ಸಾಧನೆಯ ಹೆಜ್ಜೆಗಳನ್ನು ಕ್ರಮಿಸಬೇಕು ಎಂದರು.. ಭಾರತದ ಬೆಳವಣಿಗಗೆ ಬೇಕಾದ ಸುಸ್ಥಿರ ಪರಿಕಲ್ಪನೆಯ ಅಭಿವೃದ್ಧಿಯ
ಆಲೋಚನಾ ಕ್ರಮಗಳನ್ನು ಹೊಳೆಸಿಕೊಂಡು ಮುನ್ನಡೆಯುವ ದೃಢಸಂಕಲ್ಪದಿಂದ ಮಹತ್ವದ ಕೊಡುಗೆಗಳನ್ನು ಕೊಡಲು ಸಾಧ್ಯ ಎಂದು
ಹೇಳಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರಕುಮಾರ್, ಡಾ.ಸತೀಶ್ವಂದ್ರ ಎಸ್, ಎಸ್.ಡಿ.ಎಂ ಕಾಲೇಜಿನ
ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ,
ಉಪಪ್ರಾಂಶುಪಾಲರಾದ ಡಾ.ಕೆ.ಎನ್.ಶಶಿಶೇಖರ ಕಾಕತ್ಕರ್ ಉಪಸ್ಥಿತರಿದ್ದರು.
ಡಾ.ನೆಫೀಸತ್ ಪಿ, ಸ್ವಾತಿ ಬಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ
ಸ್ವಾಗತಿಸಿದರು. ಆಡಳಿತಾತ್ಮಕ ಕುಲಸಚಿವರಾದ ಡಾ.ಶಲೀಪ್ ವಂದಿಸಿದರು. ಕಾರ್ಯಕ್ರಮದಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ
ರ್ಯಾಂಕ್ ಗಳಿಸಿದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.