ವಿಜಯಪುರ:(ಅ.27)ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯು ವಿಜಯಪುರ ಕೆ.ಬಿ.ಸಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಡಾ. ದೇವಿ ಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇತ್ತೀಚೆಗೆ ಗ್ರಾಮ ಪಂಚಾಯತಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಗ್ರಾಮ ಪಂಚಾಯತ್ ನೌಕರರಿಗೆ ವೇತನ ಶ್ರೇಣಿ ನಿಗದಿಪಡಿಸ ಬೇಕು, ಸಿ ಮತ್ತು ಡಿ ದರ್ಜೆ ಸ್ಥಾನ ಮಾನ ನೀಡಬೇಕು, ನೌಕರರಿಗೆ ಮತ್ತು ನೌಕರರ ಅವಲಂಬಿತರಿಗೆ ಅರೋಗ್ಯ ಭದ್ರತೆ ಒದಗಿಸಬೇಕು, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು, ಎಂದು ಸಭೆಯಲ್ಲಿ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮಾತನಾಡಿ, ಗ್ರಾಮ ಪಂಚಾಯತಿ ನೌಕರರ ಸಮಸ್ಯೆಗೆ ನೌಕರರೇ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ತಿಳಿಸಿದರು. ಸಂಘದಿಂದ ಈಗಾಗಲೇ ನವೆಂಬರ್ ತಿಂಗಳಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತಿ ನೌಕರರ ಹೋರಾಟದ ಬಗ್ಗೆ ಕರೆ ನೀಡಲಾಗಿದ್ದು.
ತಮ್ಮ ನ್ಯಾಯಯುತ ಹಕ್ಕಗಳನ್ನು ಪಡೆಯುವ ಬಗ್ಗೆ ರಾಜ್ಯದ ಎಲ್ಲಾ ಹಂತದ ನೌಕರರು ಒಟ್ಟಾಗಿ ಹೋರಾಟವನ್ನು ಯಶಸ್ವಿಯಾಗಿ ನಡೆಸಿಕೊಡುವ ಬಗ್ಗೆ ಚರ್ಚಿಸಲಾಯಿತು. ವಿಜಯಪುರ ಜಿಲ್ಲೆಯ ನೌಕರರ ಕುಂದುಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘಟನೆಯನ್ನು ರಚಿಸಲಾಯಿತು.
ಶ್ರೇಯೋಭಿವೃದ್ಧಿ ಸಂಘದ ಧ್ಯೇಯೋದ್ದೇಶವನ್ನು ಒಪ್ಪಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಯಿತು. ವಿಜಯಪುರ ಜಿಲ್ಲಾಧ್ಯಕ್ಷರಾಗಿ ಶ್ರೀ ರಾಮಗೊಂಡ ಇಂಡಿ , ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸಿದ್ದರಾಯಹಳ್ಳಿ ಚಡಚಣ, ಜಿಲ್ಲಾ ಉಪಾಧ್ಯಕ್ಷರಾಗಿ, ಶ್ರೀ ಸಂತೋಷ ಬಿರಾದಾರ ಬಿಜಾಪುರ , ಶ್ರೀ ರವಿ ದೇವರಹಿಪ್ಪರಗಿ , ಶ್ರೀ ಕಲ್ಲಪ್ಪ ನಾಟೇಕರ್ ಬಿಜಾಪುರ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಗೇನುಬಾ ಕಂಟಿಕರ್ ಇಂಡಿ , ಜೊತೆ ಕಾರ್ಯದರ್ಶಿಯಾಗಿ ಲಾಲಾ ಬಿ ಅಲ್ಮೆರ್, ಇವರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ರಾಜ್ಯ ಸಂಚಾಲಕರಾದ ಶ್ರೀ ಸುರೇಶ್ ಅಲ್ಲಿಮೋರೆ, ಅಶೋಕ್ ಬಡಿಗೇರ ಬೆಳಗಾಂ, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಹೇಮಚಂದ್ರ ನಂದಳಿಕೆ, ಧಾರವಾಡ ಜಿಲ್ಲಾಧ್ಯಕ್ಷರಾದ ಶ್ರೀ ಕಿರಣ್ ಕಲ್ಲೂರ, ಧಾರವಾಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಬೀರಪ್ಪ ಮೊರಬಾದ್,
ಧಾರವಾಡ ತಾಲೂಕು ಸಹ ಕಾರ್ಯದರ್ಶಿ ಶ್ರೀ ವಿಠಲ ದುಂದೂರು, ಧಾರವಾಡ ತಾಲೂಕು ಪದಾಧಿಕಾರಿ ಶ್ರೀ ಚೆನ್ನಪ್ಪ ರಾಯಪುರ, ವಿಜಯಪುರ ಜಿಲ್ಲೆಯ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಪಂಪು ಆಪರೇಟರ್, ಸ್ವಚ್ಚತೆಗಾರರು, ಅಟೆಂಡರ್ ಭಾರಿ ಸಂಖ್ಯೆಯಲ್ಲಿ ನೌಕರರು ಹಾಜರಾಗಿ ಉಪಸ್ಥಿತರಿದ್ದರು.