Gold Pledge:(ಅ.28) ಇನ್ಮುಂದೆ ಪತ್ನಿಯ ಚಿನ್ನಾಭರಣವನ್ನು ಗಿರವಿ ಇಡುವ ಮುನ್ನ ಎಚ್ಚರ. ಯಾಕೆಂದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾದೀತು. ಇಂಥದ್ದೊಂದು ಪ್ರಕರಣ ಕೇರಳದಲ್ಲಿ ಇತ್ತೀಚೆಗೆ ನಡೆದಿದ್ದು, ವ್ಯಕ್ತಿಯೊಬ್ಬ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಮದುವೆಯಾದ ಮೂರೇ ದಿನದಲ್ಲಿ ಪತ್ನಿಯ ಚಿನ್ನಾಭರಣವನ್ನು ಗಿರವಿ ಇಟ್ಟು, ಹಣದೊಂದಿಗೆ ಪರಾರಿಯಾಗಿದ್ದ ಪತಿರಾಯನನ್ನು ಕೇರಳದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಇದನ್ನೂ ಓದಿ: ⭕ಖಾಸಗಿತನದ ಹೊಸ ಕಾವಲುಗಾರ ಡಿಜಿಟಲ್ ಕಾಂಡೋಮ್!!
ಅನಂತು (34) ಎಂಬ ಈತ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. 2021ರ ಆಗಸ್ಟ್ ತಿಂಗಳಲ್ಲಿ ವರ್ಕಳ ಮೂಲದ ಯುವತಿಯನ್ನು ಮದುವೆಯಾಗಿದ್ದ. ಇದಾದ ಕೆಲವೇ ದಿನಕ್ಕೆ ತನ್ನ ಪತ್ನಿಯ 52 ಸವರನ್ ಚಿನ್ನವನ್ನು ಗಿರವಿ ಇಟ್ಟು 13.5 ಲಕ್ಷ ರೂ.ಗೂ ಹೆಚ್ಚು ಹಣವನ್ನು ತೆಗೆದುಕೊಂಡಿದ್ದ. ಚಿನ್ನಾಭರಣ ಗಿರಿವಿ ಇಟ್ಟಿದ್ದಲ್ಲದೆ, ಇನ್ನು ಹಣ, ಆಸ್ತಿ ಬೇಕು ಎಂದು ಪತ್ನಿ ಜೊತೆಗೆ ನಿರಂತರವಾಗಿ ಜಗಳವಾಡುತ್ತಿದ್ದ. ಕೊನೆಗೆ ಪತಿಯ ಕಿರುಕುಳ ತಾಳಲಾರದೆ ಮಹಿಳೆ, ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಅನಂತು ಎಸ್ಕೇಪ್ ಆಗಿದ್ದ.
ಮುಖ್ಯವಾಗಿ ಮದುವೆಗೆ ಉಡುಗೊರೆಯಾಗಿ ಪಡೆದ ಚಿನ್ನವನ್ನು ಅಥವಾ ಪತ್ನಿಗೆ ಸಂಬಂಧಿಸಿದ ಯಾವುದೇ ಚಿನ್ನವನ್ನು ಆಕೆಯ ಅನುಮತಿಯಿಲ್ಲದೆ ಗಿರವಿ ಇಡುವುದು ನಂಬಿಕೆ ದ್ರೋಹ ಎಂದು ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ತೀರ್ಪು ನೀಡಿದೆ. ಅಲ್ಲದೆ, ಕಾಸರಗೋಡು ಮೂಲದ ವ್ಯಕ್ತಿಯ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯುವ ಮೂಲಕ ಖಡಕ್ ಸಂದೇಶವನ್ನು ರವಾನಿಸಿದೆ.
ಬ್ಯಾಂಕ್ನ ಲಾಕರ್ನಲ್ಲಿ ಸೇಫ್ ಆಗಿ ಇಡುವಂತೆ ಪತ್ನಿ ನೀಡಿದ್ದ 50 ಪವನ್ ಚಿನ್ನವನ್ನು ತನ್ನ ಸ್ವಂತ ಬಳಕೆಗಾಗಿ ವ್ಯಕ್ತಿಯೊಬ್ಬ ಬ್ಯಾಂಕ್ನಲ್ಲಿ ಗಿರವಿ ಇಟ್ಟಿದ್ದ. ಅಲ್ಲದೆ, ಲಾಕರ್ನಲ್ಲಿ ಭದ್ರವಾಗಿ ಇಟ್ಟಿರುವುದಾಗಿ ನಕಲಿ ದಾಖಲೆಗಳನ್ನು ಪತ್ನಿಗೆ ತೋರಿಸಿದ್ದ. ಇದರ ನಡುವೆ ಭಿನ್ನಾಭಿಪ್ರಾಯಗಳಿಂದ ಇಬ್ಬರು ಡಿವೋರ್ಸ್ ಪಡೆದುಕೊಂಡರು. ಬಳಿಕ ಪತ್ನಿ ತನ್ನ ಚಿನ್ನಾಭರಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದಾದ ನಂತರ ಮಹಿಳೆ ತನ್ನ ಪತಿ ವಿರುದ್ಧ ಪೊಲೀಸ್ ದೂರು ನೀಡಿದ್ದಳು. ಈ ಪ್ರಕರಣದ ವಿಚಾರಣೆ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಂಬಿಕೆ ದ್ರೋಹದ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಆರೋಪಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದ. ಆದರೆ, ಹೈಕೋರ್ಟ್ ಕೂಡ ಕಾಸರಗೋಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.