Wed. Nov 20th, 2024

Kasaragod: ಕಳಿಯಾಟ ಮಹೋತ್ಸವದಲ್ಲಿ ಬೆಂಕಿ ಅವಘಡ – ಪುಟ್ಟ ಮಗುವನ್ನು ರಕ್ಷಿಸಿದ ದೈವ

ಕಾಸರಗೋಡು:(ಅ.30) ನೀಲೇಶ್ವರದ ವೀರರ್ಕಾವು ದೈವಸ್ಥಾನದಲ್ಲಿ ಸೋಮವಾರ ತಡರಾತ್ರಿ ನಡೆದ ವಾರ್ಷಿಕ ಕಳಿಯಾಟಂ ಸಂದರ್ಭದಲ್ಲಿ ಪಟಾಕಿ ಸ್ಪೋಟದಿಂದ ಸಂಭವಿಸಿದ ಭೀಕರ ದುರಂತದಲ್ಲಿ 150 ಮಂದಿ ಗಂಭೀರ ಗಾಯಗೊಂಡಿದ್ದರೆ, ಅದರಲ್ಲಿ 8 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ⭕Belthangady: ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ

ಈ ಮಧ್ಯೆ ದುರಂತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಅನೇಕರು ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ದೈವ ನರ್ತಕನೇ ತನ್ನ ಪ್ರಾಣವನ್ನು ಒತ್ತೆ ಇಟ್ಟು ಪುಟ್ಟ ಮಗುವನ್ನು ರಕ್ಷಿಸಿದ ಘಟನೆ ಸುದ್ದಿಯಾಗುತ್ತಿದೆ. ತನ್ನ ಜೀವಕ್ಕೆ ಅಪಾಯವಿದ್ದರೂ ಲೆಕ್ಕಿಸದೆ ಬೆಂಕಿ ಮಧ್ಯೆ ಸಿಕ್ಕಿಬಿದ್ದಿದ್ದ ಮಗುವೊಂದನ್ನು ರಕ್ಷಿಸಿದ್ದಾರೆ.

ದೈವಸ್ಥಾನದ ಪಕ್ಕವೇ ಇದ್ದ ಪಟಾಕಿ ದಾಸ್ತಾನು ಸಿಡಿಯಲಾರಂಭಿಸಿದೆ. ಪಟಾಕಿ ಸಿಡಿದ ಭೀಕರತೆಯನ್ನು ನೋಡಿದ ಭಕ್ತರು ಹೆದರಿ ದಿಕ್ಕಾಪಾಲಾಗಿ ಓಡಿದ್ದಾರೆ. ಈ ಮಧ್ಯೆ ಪುಟ್ಟ ಮಗುವೊಂದು ಬೆಂಕಿಯ ನಡುವೆ ಸಿಕ್ಕಿ ಹಾಕಿಕೊಂಡಿದೆ. ಪಕ್ಕದಲ್ಲೇ ಇದ್ದ ದೈವ ಇದನ್ನು ಗಮನಿಸಿ ಕ್ಷಣ ಮಾತ್ರದಲ್ಲಿ ಧಾವಿಸಿ ಹೋಗಿ ಮಗುವನ್ನು ರಕ್ಷಿಸಿ ಎತ್ತಿಕೊಂಡು ಬಂದಿದ್ದಾರೆ. ಅದೃಷ್ಟವಶಾತ್ ಮಗು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದೆ.

ಮಗುವನ್ನು ರಕ್ಷಣೆ ಮಾಡಿದ್ದ ದೈವ ನರ್ತಕ ನಿಧಿನ್ ಪಣಿಕ್ಕರ್ ವೃತ್ತಿಯಿಂದ ಪೊಲೀಸ್ ಅಧಿಕಾರಿ. ದೈವಸ್ಥಾನದ ವಾರ್ಷಿಕ ಕಳಿಯಾಟಂಗೆ ಅವರು ತಪ್ಪದೆ ತೆಯ್ಯಂ ಸೇವೆ ಮಾಡುತ್ತಾರೆ. ಬೆಂಕಿ ಹತ್ತಿಕೊಂಡಾಗ ಅವರ ಕರ್ತವ್ಯ ಪ್ರಜ್ಞೆ ಜಾಗೃತವಾಗಿತ್ತು. ದೈವದ ಪೋಷಾಕಿನಲ್ಲೇ ಅವರು ರಕ್ಷಣಾ ಕಾರ್ಯ ಮಾಡಿದ್ದಾರೆ.

ಜನರು ಹೆದರಿ ದಿಕ್ಕಾಪಾಲಾಗಿ ಓಡುತ್ತಿದ್ದರು. ಈ ನಡುವೆ ಬೆಂಕಿಯ ನಡುವಿನಿಂದ ಮಗುವಿನ ಅಳು ಕೇಳಿಸಿತು. ಆ ಕ್ಷಣ ನನಗೇನಾಗಬಹುದು ಎಂದು ಯೋಚಿಸಲಿಲ್ಲ. ಹೇಗಾದರೂ ಮಗುವನ್ನು ರಕ್ಷಿಸಬೇಕೆಂದು ಮಾತ್ರ ನನ್ನ ಮನಸ್ಸಿನಲ್ಲಿತ್ತು. ಹೀಗಾಗಿ ಬೆಂಕಿಯ ಮಧ್ಯೆ ನುಗ್ಗಿದೆ. ದೈವ ಕೃಪೆಯಿಂದ ನನಗೂ, ಮಗುವಿಗೂ ಹೆಚ್ಚು ಹಾನಿಯಾಗಿಲ್ಲ ಎಂದು ನಿಧಿನ್ ಪಣಿಕ್ಕರ್ ಹೇಳಿದ್ದಾರೆ. ಮಗುವನ್ನು ರಕ್ಷಿಸಿದ ಘಟನೆ ಸಾಕಷ್ಟು ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *