ಮಂಗಳೂರು:(ಅ.30) ಪಿಲಿಕುಳ ನಿಸರ್ಗಧಾಮದ ಟಿಕೆಟ್ ಕೌಂಟರ್ ಬಳಿ ಅಗ್ನಿ ಅವಘಡ ಸಂಭವಿಸಿ, ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾದ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಇದನ್ನೂ ಓದಿ: 🛑ಕಾಸರಗೋಡು: ಕಳಿಯಾಟ ಮಹೋತ್ಸವದಲ್ಲಿ ಬೆಂಕಿ ಅವಘಡ
ಇಲ್ಲಿನ ವರ್ಕ್ ಶಾಪ್ ನಲ್ಲಿ ಚಾರ್ಜ್ ಗೆ ಹಾಕಿದ್ದ ಒಂದು ಎಲೆಕ್ಟ್ರಿಕ್ ವಾಹನದಲ್ಲಿ ಸ್ಪಾರ್ಕ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಒಟ್ಟು ಎರಡು ವಾಹನಗಳು ಸಂಪೂರ್ಣ ಭಸ್ಮವಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಹತ್ತಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳಿದ್ದವು ಎನ್ನಲಾಗಿದೆ.
ಆದರೆ ಅದೃಷ್ಟವಶಾತ್ ಭಾರೀ ದೊಡ್ಡ ಅನಾಹುತ ತಪ್ಪಿದೆ. ಇನ್ನು ಎರಡು ವಾಹನಗಳು ಹೊತ್ತಿ ಉರಿಯುತ್ತಿದ್ದರೂ ಕದ್ರಿ ಅಗ್ನಿ ಶಾಮಕ ದಳ ಕ್ಲಪ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಿಬ್ಬಂದಿಗಳೇ ಸೇರಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದರು. ಅಂತಿಮವಾಗಿ ಅರ್ಧ ಗಂಟೆ ಕಳೆದು ಕದ್ರಿ ಅಗ್ನಿ ಶಾಮಕ ದಳ ಬಂದು, ಬೆಂಕಿ ನಂದಿಸಿದೆ.
ಅಲ್ಲದೆ ಘಟನಾ ಸ್ಥಳಕ್ಕೆ ಕಾವೂರು ಠಾಣಾ, ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.