Wed. Nov 20th, 2024

Kerala: ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಹೋಗುವ ಯಾತ್ರಿಕರಿಗೆ ಕೇರಳ ಸರ್ಕಾರದಿಂದ ವಿಮೆ?! – ಯಾಕೆ ಈ ಸೌಲಭ್ಯ ಗೊತ್ತಾ?!!

ಕೇರಳ:(ನ.3) ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಹೋಗುವ ಯಾತ್ರಿಕರಿಗೆ ಈ ವರ್ಷ ಕೇರಳ ಸರಕಾರವು 5 ಲ.ರೂ. ಉಚಿತ ವಿಮೆಯ ಸೌಲಭ್ಯ ನೀಡಲಿದೆ.

ನವೆಂಬರ್ ತಿಂಗಳಾಂತ್ಯದಲ್ಲಿ ಮಂಡಲ ಮತ್ತು ಮಕರವಿಳಕ್ಕು ಯಾತ್ರೆ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೋಟಿಗಟ್ಟಲೆ ಭಕ್ತರು ಶಬರಿಮಲೆಗೆ ಬರುತ್ತಾರೆ. ಇವರೆಲ್ಲರೂ ಕೇರಳ ರಾಜ್ಯ ಸರಕಾರದ ವಿಮಾ ವ್ಯಾಪ್ತಿಗೆ ಒಳಪಡಲಿದ್ದಾರೆ.

ಶಬರಿಮಲೆ ಸನ್ನಿಧಾನದ ಆಡಳಿತ ನಿರ್ವಹಿಸುತ್ತಿರುವ ಸರಕಾರದ ಅಧೀನದ ತಿರುವಾಂಕೂರು ದೇವಸ್ವಂ ಬೋರ್ಡ್ ಭಕ್ತರಿಗೆ ವಿಮಾ ಸೌಲಭ್ಯ ಒದಗಿಸಲಿದೆ. ಯಾತ್ರಿಕರು ದುರ್ಮರಣಕ್ಕೀಡಾದರೆ ಕುಟುಂಬಕ್ಕೆ 5 ಲ.ರೂ. ವಿಮೆ ಪರಿಹಾರ ಸಿಗಲಿದೆ. ಮೃತದೇಹವನ್ನು ಊರಿಗೆ ತಲುಪಿಸುವ ವ್ಯವಸ್ಥೆಯನ್ನೂ ದೇವಸ್ವಂ ಬೋರ್ಡ್ ಮಾಡಲಿದೆ.

ಎರಡು ತಿಂಗಳ ಯಾತ್ರೆಗಾಗಿ ಶಬರಿಮಲೆಯಲ್ಲಿ ಭರದ ಸಿದ್ಧತೆ ನಡೆದಿದೆ. ನೂಕುನುಗ್ಗಲು ತಪ್ಪಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರಿಗೆ ಕುಡಿಯುವ ನೀರು, ಆಹಾರಕ್ಕೆ ಸಮಸ್ಯೆಯಾಗದಂತೆ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ದೇವಸ್ವಂ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ.

13,600 ಪೊಲೀಸರು, 2500 ಅಗ್ನಿಶಾಮಕ ಸಿಬ್ಬಂದಿ ಮತ್ತು 1000 ನೈರ್ಮಲ್ಯ ಸಿಬ್ಬಂದಿಯನ್ನು ಕೇರಳ ಸರಕಾರ ಶಬರಿಮಲೆಯಲ್ಲಿ ನಿಯೋಜಿಸಲಿದೆ. ಶಬರಿಮಲೆಯಲ್ಲಿ ಅನ್ನದಾನ ವ್ಯವಸ್ಥೆಯೂ ಇದ್ದು ಕಳೆದ ವರ್ಷ ಸುಮಾರು 15 ಲಕ್ಷ ಭಕ್ತರು ಅನ್ನದಾನ ಸ್ವೀಕರಿಸಿದ್ದಾರೆ. ಈ ವರ್ಷ 20 ಲಕ್ಷ ಭಕ್ತರಿಗೆ ಅನ್ನದಾನ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ವಂ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *