Wed. Nov 20th, 2024

Puttur: ಗೆಜ್ಜೆಗಿರಿಯ ಹಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ ಅವರಿಗೆ ಒಲಿದ “ಕರ್ನಾಟಕ ಜಾನಪದ ಪ್ರಶಸ್ತಿ”

ಪುತ್ತೂರು:(ನ.6) ಪುತ್ತೂರು ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತ್ಲ್ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ, ಹಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ(77) ಅವರು ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: 🏐ಮುಂಡಾಜೆ: ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಗಳ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ರಾಜ್ಯದ 30 ಜಿಲ್ಲೆಗಳಿಂದ ತಲಾ ಒಬ್ಬರನ್ನು ಆರಿಸಿ 2024ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದ್ದು, ಲೀಲಾವತಿ ಪೂಜಾರಿ ಅವರು ಕಳೆದ 55 ವರ್ಷಗಳಿಂದ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ತಮ್ಮ 15ನೇ ವರ್ಷ ವಯಸ್ಸಿನಲ್ಲಿಯೇ ನಾಟಿ ಔಷಧ ವಿದ್ಯೆಯನ್ನು ಕಲಿತುಕೊಂಡಿದ್ದ ಲೀಲಾವತಿ ಪೂಜಾರಿ ಅವರು ಕಳೆದ 55 ವರ್ಷಗಳಲ್ಲಿ ಸಾವಿರಾರು ಮಂದಿಯ ರೋಗಗಳನ್ನು ಗಿಡಮೂಲಿಕೆ ಔಷಧಿಯ ಮೂಲಕ ಗುಣಪಡಿಸಿದ್ದಾರೆ. ಸರ್ಪಸುತ್ತು, ಕೆಂಪು, ಬೆಸುರ್ಪು, ದೃಷ್ಟಿ, ಸೋರಿಯಾಸಿಸ್ ಚರ್ಮರೋಗ, ಮಕ್ಕಳ ಚಿಕಿತ್ಸೆ, ಸಂಧಿವಾತ ಇತ್ಯಾದಿ ಸಮಸ್ಯೆಗಳನ್ನು ನಾಟಿ ಔಷಧದ ಮೂಲಕ ಗುಣಪಡಿಸುತ್ತಿದ್ದರು.

ಪಾರಂಪರಿಕ ಮಂತ್ರ ವಿದ್ಯೆಯನ್ನು ಹೊಂದಿರುವ ಲೀಲಾವತಿ ಅವರು ದೃಷ್ಟಿದೋಷ ನಿವಾರಣೆಗೆ ನೂಲು ಕಟ್ಟುವುದರಲ್ಲಿ ಮತ್ತು ಬೆಂಕಿ ಅವಘಡದಿಂದಾಗುವ ಉರಿ ತೆಗೆಯುವುದರಲ್ಲಿ ಎತ್ತಿದ ಕೈಯಾಗಿದ್ದರು. ಗೆಜ್ಜೆಗಿರಿ ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಇಲ್ಲಿ ಕಾರಣಿಕ ಮಾತೆ ದೇಯಿ ಬೈದ್ಯೆತಿಯ ಸ್ಮರಣೆಯಲ್ಲಿ ಅವರು ಔಷಧ ನೀಡುತ್ತಿದ್ದಾರೆ. ತಮ್ಮ ಪುತ್ರ, ಗೆಜ್ಜೆಗಿರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಶ್ರೀಧರ ಪೂಜಾರಿ ಅವರ ಜತೆ ಸೇರಿಕೊಂಡು ಕೇಶ ತೈಲ, ನೋವಿನ ಎಣ್ಣೆಯನ್ನೂ ತಯಾರಿಸುತ್ತಿದ್ದಾರೆ.

500 ವರ್ಷಗಳ ಹಿಂದೆ ಬದುಕಿದ ಕೋಟಿ ಚೆನ್ನಯರ ತಾಯಿಯಾದ ದೇಯಿ ಬೈದ್ಯೆತಿ ನಾಟಿ ವೈದ್ಯೆಯಾಗಿದ್ದರು. 65 ವರ್ಷಗಳ ಹಿಂದೆ ಇದೇ ಗೆಜ್ಜೆಗಿರಿಯಲ್ಲಿನ ಕುಟುಂಬಕ್ಕೆ ಸೊಸೆಯಾಗಿ ಬಂದ ಲೀಲಾವತಿ ಪೂಜಾರಿ ಅವರು, ತಮ್ಮ ಗಂಡ ದಿ.ದೂಮಣ್ಣ ಪೂಜಾರಿ ಮತ್ತು ಅತ್ತೆ ದಿ.ಮದನು ಪೂಜಾರಿ ಅವರಿಂದ ನಾಟಿ ವೈದ್ಯಕೀಯದ ವಿದ್ಯೆ ಕಲಿತುಕೊಂಡು ಈ ನಾಟಿ ವೈದ್ಯಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಮೂಲ್ಕಿ ಬಿಲ್ಲವ ಸಂಘದಲ್ಲಿ ನಡೆದ ಮಹಿಳಾ ಸಮಾಗಮ, ಮಂಗಳೂರಿನಲ್ಲಿ ನಡೆದ ಬಿಲ್ಲವ ಮಹಿಳಾ ಸಮಾವೇಶ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆ ಲೀಲಾವತಿ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಗೆಜ್ಜೆಗಿರಿಯಲ್ಲಿ ತನ್ನ ಪುತ್ರನಾದ ಶ್ರೀಧರ ಪೂಜಾರಿ ಅವರೊಂದಿಗೆ ವಾಸ್ತವ್ಯವಿರುವ ಲೀಲಾವತಿ ಪೂಜಾರಿ ಅವರು ಪುತ್ರರಾದ ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ ಹಾಗೂ ಪುತ್ರಿ ಸವಿತಾ ಮಹಾಬಲ ಪೂಜಾರಿ ಅವರನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *