Wed. Nov 20th, 2024

Puttur : ಚಡ್ಡಿ ಗ್ಯಾಂಗ್ ನ ಕುರಿತು ನಕಲಿ ಕಥೆ ಕಟ್ಟಿದ ಪುತ್ತೂರಿನ ಕೆಯ್ಯೂರಿನ ಮಹಿಳೆ

“ರಾತ್ರಿ ನನ್ನ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ.ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ಗ್ಯಾಂಗ್‌ನಲ್ಲಿ ನಾಲ್ವರು ಇದ್ದರು. ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ” ಎಂದು ಹೇಳಿಕೊಂಡು ಮಹಿಳೆಯೋರ್ವರು ಕಥೆ ಕಟ್ಟಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಯ್ಯೂರಿನಲ್ಲಿ ನಡೆದಿದೆ.

ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ರವರು ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಇದೊಂದು ಕಟ್ಟು ಕಥೆ ಆಗಿದ್ದು ಮಹಿಳೆ ಕಳುಹಿಸಿದ ಫೋಟೋಗಳು 2 ವರ್ಷಗಳ ಹಿಂದೆ ಮಲೆಯಾಳಂನ ಖಾಸಗಿ ನ್ಯೂಸ್‌ ಚಾನೆಲ್ನಲ್ಲಿ ಪ್ರಸಾರಗೊಂಡ ಕೊಟ್ಟಾಯಂನಲ್ಲಿ ನಡೆದ ಒಂದು ಸ್ಟೋರಿಯಲ್ಲಿ ಬರುವ ಫೋಟೋಗಳಾಗಿವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಡಿವೈಎಸ್‌ಪಿ ಅರುಣ್ ನಾಗೇಗೌಡ, ಸಂಪ್ಯ ಠಾಣಾ ತನಿಖಾ ವಿಭಾಗದ ಎಎಸ್‌ಐ ಸುಷ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.

ಚಡ್ಡಿ ಗ್ಯಾಂಗ್‌ನ ಕಥೆ ಕಟ್ಟಿದ ಮಾರ್ಗರೇಟ್ ಎಂಬವರು ಮೂಲತಃ ಕೇರಳದವರಾಗಿದ್ದಾರೆ. ಇವರು ತನ್ನ ಗಂಡ ಸೈಂಟ್ ಜಾರ್ಜ್ ಹಾಗೂ ಮಗುವಿನೊಂದಿಗೆ ಕೆಯ್ಯೂರು ಗ್ರಾಮದ ಸಣಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಜಾರ್ಜ್ ರವರು ರಬ್ಬರ್ ಟ್ಯಾಪಿಂಗ್ ಹಾಗೂ ರಬ್ಬರ್ ಹಾಲು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಮಾರ್ಗರೇಟ್‌ರವರ ಮೊಬೈಲ್ ಫೋನ್ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವರು ಯೂಟ್ಯೂಬ್ ಹೆಚ್ಚಾಗಿ ನೋಡುತ್ತಿರುವುದು ಅದರಲ್ಲೂ ಕ್ರೈಂಗೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿರುವುದು ತಿಳಿದುಬಂದಿದೆ.

ಚಡ್ಡಿ ಗ್ಯಾಂಗ್‌ನ ಕಥೆಯೂ ಇದೇ ರೀತಿ ಆಗಿದ್ದು ಮಲೆಯಾಳಂನ ಖಾಸಗಿ ನ್ಯೂಸ್‌ ಚಾನೆಲ್ನಲ್ಲಿ 2 ವರ್ಷಗಳ ಹಿಂದೆ ಪ್ರಸಾರಗೊಂಡ ವೀಡಿಯೋ ಸ್ಟೋರಿಯೊಂದರಲ್ಲಿ ಬರುವ ದೃಶ್ಯಗಳಿಂದ ಈ ಫೋಟೋಗಳನ್ನು ಸ್ಟ್ರೀನ್‌ಶಾಟ್ ಮೂಲಕ ತೆಗೆದಿದ್ದಾರೆ. ಆ ಫೋಟೋವನ್ನು ಮೊದಲಿಗೆ ಮನೆಯ ಓನರ್‌ಗೆ ಕಳುಹಿಸಿ ಮನೆಗೆ ದರೋಡೆಕೋರರು ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್.ರವರು ಮೊದಲಿಗೆ ಮಹಿಳೆಯ ಮೊಬೈಲ್ ಪಡೆದುಕೊಂಡು ಪರಿಶೀಲನೆ ನಡೆಸಿದರು. ಈ ವೇಳೆ ಮಹಿಳೆ ಶೇರ್ ಮಾಡಿಕೊಂಡ ಫೋಟೋಗಳು ಅಸಲಿ ಅಲ್ಲ ಎಂಬುದು ತಿಳಿದು ಬಂದಿದೆ. ಇದೊಂದು ಸಂಪೂರ್ಣ ಕಟ್ಟು ಕಥೆ ಆಗಿದ್ದು, ಮಹಿಳೆ ಹಂಚಿಕೊಂಡ ಫೋಟೋಗಳು ಕೊಟ್ಟಾಯಂನಲ್ಲಿ ನಡೆದ ಒಂದು ವೀಡಿಯೋ ಸ್ಟೋರಿಯ ಫೋಟೋಗಳಾಗಿವೆ. ಕೆಯ್ಯೂರು ಸಣಂಗಳಕ್ಕೆ ಚಡ್ಡಿ ಗ್ಯಾಂಗ್‌ನ ದರೋಡೆಕೋರರು ಬಂದಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಸರ್ಕಲ್ ಇನ್ಸ್ಪೆಕ್ಟರ್ ರವಿ.ಬಿ.ಎಸ್. ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *