Wed. Nov 20th, 2024

Ujire: ಉಜಿರೆ ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ದೀಪಾವಳಿ ಸಂಭ್ರಮ

ಉಜಿರೆ:(ನ.9) ಶ್ರೀ ಧ.ಮಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ದೀಪಾವಳಿ ಹಬ್ಬವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಡಾ. ಸತೀಶ್ಚಂದ್ರ ಎಸ್ ಮಾತನಾಡಿದರು. ಪ್ರತೀ ಹಬ್ಬಕ್ಕೂ ತನ್ನದೇ ಆದ ಮಹತ್ವವಿದ್ದು ಕರಾವಳಿ ಭಾಗದಲ್ಲಿ ದೀಪಾವಳಿಯ ಹಿನ್ನೆಲೆಯನ್ನು ವಿವರಿಸಿದರು.

ಇದನ್ನೂ ಓದಿ: 😱ಗುಜರಾತ್‌ : ಕಾರಿಗೂ ಅಂತ್ಯ ಸಂಸ್ಕಾರ.. ಸಮಾಧಿ ಮಾಡಿ ಪ್ರತಿನಿತ್ಯ ಪೂಜೆ ಮಾಡಲು ನಿರ್ಧಾರ ..!!!

“ಸ್ನಾತಕೋತ್ತರ ವಿದ್ಯಾರ್ಥಿಗಳು ತಾವು ಅಭ್ಯಸಿಸುವ ವಿಚಾರಗಳ ಹಿಂದಿನ ಮೂಲ ಉದ್ದೇಶವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ಹಬ್ಬ ಹರಿದಿನಗಳ ಹಿನ್ನೆಲೆ ಅರ್ಥ ಮಾಡಿಕೊಳ್ಳಬೇಕು. ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಜೀವನ ಮತ್ತು ಜೀವದ ಸಂಕೇತ. ಗ್ರಾಮೀಣ ಬದುಕಿಗೆ ಹತ್ತಿರವಾಗಿರುವ ದೀಪಾವಳಿಯ ಹಿನ್ನೆಲೆಯನ್ನು ಎಲ್ಲರೂ ಅರಿತಿರಬೇಕು. ಕರಾವಳಿ ಭಾಗದಲ್ಲಿ ಮಳೆಗಾಲದ ಕೊನೆಗೆ ಆಹಾರದ ದಾಸ್ತಾನು ಖಾಲಿಯಾಗುತ್ತಾ ಬರುತ್ತದೆ. ನಂತರ ದೀಪಾವಳಿ ಹಬ್ಬದ ಸಂದರ್ಭಕ್ಕಾಗುವಾಗ ಪೈರು ಬೆಳೆದು ಎದ್ದು ನಿಂತಿರುತ್ತದೆ. ಹೀಗಾಗಿ ದೀಪಾವಳಿ ನಮ್ಮೂರ ಜನರಿಗೆ ಅತ್ಯಂತ ಸಂಭ್ರಮದ ಹಬ್ಬವಾಗಿ ರೂಪುಗೊಂಡಿದೆ. ಇದೇ ರೀತಿ ಪ್ರತಿ ಹಬ್ಬಕ್ಕೂ ತನ್ನದೇ ಮಹತ್ವ ಇರುತ್ತದೆ” ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಳೆಯುತ್ತಿರುವ ತಂತ್ರಜ್ಞಾನ, ಲಭ್ಯವಾಗುತ್ತಿರುವ ಮಾಹಿತಿ ಹಾಗೂ ಮನರಂಜನೆ ಮನುಷ್ಯರನ್ನು ದ್ವೀಪವನ್ನಾಗಿಸುತ್ತಿವೆ. ಈ ಏಕತಾನತೆಯಿಂದ ಹೊರಬರಲು ಹಬ್ಬಗಳು ಸಹಕಾರಿ. ನಗರೀಕರಣದ ಕಾರಣ ನಮ್ಮಲ್ಲಿ ಕಡಿಮೆಯಾಗುತ್ತಿರುವ ಮಾನವೀಯತೆ ಹಾಗೂ ನಮ್ಮ ಪ್ರಿಯ ಜನರ ನಡುವಿನ ಸಂಬಂಧಗಳನ್ನು ಉಳಿಸಿ ಬೆಳೆಸುವಲ್ಲಿ ದೀಪಾವಳಿಯಂತಹ ಹಬ್ಬಗಳು ಪ್ರಮುಖ ಪಾತ್ರ ವಹಿಸಿವೆ.

ಆಧುನಿಕತೆಯ ಪ್ರಭಾವದಿಂದಾಗಿ ಹಳೆಯ ಆಚಾರಣೆಗಳ ನಿರಾಕರಣೆ ಹಾಗೂ ಹೊಸತರ ಮೇಲೆ ಅವಲಂಬನೆ ಹೆಚ್ಚಾಗುತ್ತಿದೆ. ಬೇಂದ್ರೆಯವರ ‘ಹಳೆ ಬೇರು, ಹೊಸ ಚಿಗುರು, ಕೂಡಿದಾಗ ಮರ ಸೊಬಗು’ ಎಂಬ ಮಾತಿನಂತೆ ಹೊಸ ಕಾಲದಲ್ಲಿ ಹಳೆ ಹಬ್ಬಗಳ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಆಶಿಸಿದರು.


ಸಭೆಯ ಮೊದಲು ಲಕ್ಷ್ಮೀ ಪೂಜೆ ಹಾಗೂ ಗೋಪೂಜೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗಳಿಗೆ ಹಾಗೂ ವಾಚ್‍ಮ್ಯಾನ್‍ಗೆ ವಸ್ತ್ರ ದಾನ ಮಾಡಲಾಯಿತು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ಬಲೀಂದ್ರ ಪೂಜೆಯನ್ನು ನೆರವೇರಿಸಲಾಯಿತು.

ಬಲೀಂದ್ರನನ್ನು ಪದ ಹೇಳಿ ಕರೆಯುವ ಸಂದರ್ಭದಲ್ಲಿ ಆಚರಣೆಯ ಭಾಗವಾಗಿ ಪಟಾಕಿ ಹೊಡೆದು ಸಂಭ್ರಮಿಸಲಾಯಿತು. ಕೊನೆಯಲ್ಲಿ ಪಿಲಿನಲಿಕೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್, ಡಾ ವಿಶ್ವನಾಥ್. ಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾನ್ವಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿ ದಿವ್ಯಶ್ರೀ ಹೆಗಡೆ ವಂದಿಸಿದರು.

Leave a Reply

Your email address will not be published. Required fields are marked *