ಬೆಳ್ತಂಗಡಿ :(ನ.10) ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಾದಿಯಲ್ಲಿ ಇಂಗ್ಲೀಷ್ ಭಾಷಾ ಕಲಿಕೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ.ಮಂಜುಶ್ರೀ ಹೇಳಿದರು.
ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್, ಬಳಂಜ ಎಜುಕೇಷನಲ್ ಟ್ರಸ್ಟ್ ಮತ್ತು ಎಸ್. ಡಿ. ಎಂ ಸ್ನಾತಕೋತ್ತರ ಸಂಸ್ಥೆಯ ಸಹಯೋಗದೊಂದಿಗೆ ವಿವಿಧೆಡೆ ಆಯೋಜಿತವಾಗಲಿರುವ “ಸ್ಪೋಕನ್ - ಇಂಗ್ಲೀಷ್ ಕ್ಲಾಸ್” ಸರಣಿ ಕಾರ್ಯಕ್ರಮಕ್ಕೆ ಬಳಂಜದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಮಾಜಿಕ ಪರಿಕಲ್ಪನೆಗಳ ನಿಟ್ಟಿನಲ್ಲಿ ಆಂಗ್ಲ ಶಿಕ್ಷಣವು ಉನ್ನತ ಪಾತ್ರ ವಹಿಸುತ್ತಲೇ ಬಂದಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ವಿವಿಧೆಡೆ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಿರ್ವಹಿಸಲಾಗುವುದು. ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕೆಯ ಕುರಿತು ಆಸಕ್ತಿ ಮೂಡಿಸಲಾಗುವುದು ಎಂದರು.
ಇಂಗ್ಲೀಷ್ ಭಾಷಾ ಕಲಿಕೆಯಲ್ಲಿ ಸರಕಾರಿ ಶಾಲೆಗಳೂ ಮುಂಚೂಣಿಯಲ್ಲಿದ್ದು ವಿದ್ಯಾರ್ಥಿಗಳ ಸಾಮಾನ್ಯ ಇಂಗ್ಲೀಷ್ ಜ್ಞಾನ ವರ್ಧನೆಗಾಗಿ ಈ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ನಿರಂತರ ಮೂರು ತಿಂಗಳವರೆಗೆ ಈ ಕಾರ್ಯಕ್ರಮ ಮುನ್ನಡೆಯಲಿದೆ.
ಈ ವೇದಿಕೆಯಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಕವಿತಾ ಎನ್, ಬಳಂಜ ಎಜುಕೇಶನ್ ಟ್ರಸ್ಟ್ನ ಸದಸ್ಯರಾದ ರತ್ನರಾಜ್ ಜೈನ್, ಪ್ರಮೋದ್ ಜೈನ್ ಶಾಲೆಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಗುರುಗಳಾದ ಶ್ರೀಮತಿ ರೆನಿಲ್ಡ ಜೋಯಿಸ್ ಮಾತಾಯ್ಸ್ ಹಾಗೂ ಶಾಲೆಯ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸುಲೋಚನ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲೆಯ ಆಂಗ್ಲಭಾಷಾ ಶಿಕ್ಷಕ ಮಲ್ಲಿಕಾರ್ಜುನ ಆರ್ ನಿರೂಪಿಸಿದರು.