Wed. Nov 20th, 2024

Nelamangala: ಮನೆ ಬಾಡಿಗೆ ಕೇಳುವ ನೆಪದಲ್ಲಿ ಕಳ್ಳತನ – ಮೋಜು ಮಸ್ತಿ ಮಾಡುತ್ತಿದ್ದ ದಂಪತಿ ಅಂದರ್!!

ನೆಲಮಂಗಲ:(ನ.10) ಮನೆ ಬಾಡಿಗೆ ಕೇಳುವ ನೆಪದಲ್ಲಿ ಸರ ಎಗರಿಸುತ್ತಿದ್ದ ದಂಪತಿಯನ್ನು ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ. ಪತಿ ಜೀವನ್ ಅಲಿಯಾಸ್ ಜೀವ (30), ಪತ್ನಿ ಆಶಾ (30) ಬಂಧಿತರು.

ಇದನ್ನೂ ಓದಿ: ⭕ಪುತ್ತೂರು: ಗರ್ಲ್ಸ್ ಹಾಸ್ಟೆಲ್ ನಲ್ಲಿ ರಾತ್ರಿ ಸುತ್ತಾಡಿದ ಯುವಕ‌!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದವರಾದ ಬಂಧಿತರಿಂದ 17 ಲಕ್ಷ ಮೌಲ್ಯದ 240 ಗ್ರಾಂ ಚಿನ್ನಾಭರಣ, 90 ಗ್ರಾಂ ಬೆಳ್ಳಿ ಜಪ್ತಿ ಮಾಡಲಾಗಿದೆ.


ಬಂಧಿತ ದಂಪತಿ ವಿರುದ್ಧ ದರೋಡೆ, ಕೊಲೆ, ಕೊಲೆ ಯತ್ನ ಸೇರಿ ಒಟ್ಟು 15 ಪ್ರಕರಣಗಳು ದಾಖಲಾಗಿದ್ದವು. 2024ರ ಫೆ.13ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ವೃದ್ದೆ ಭಾಗ್ಯಮ್ಮ ಕೊಲೆಯಾಗಿತ್ತು. ಕೊಲೆ ಬಳಿಕ ಸಂಪ್‌ನಲ್ಲಿ ಮೃತದೇಹ ಹಾಕಿ ದಂಪತಿ ಪರಾರಿಯಾಗಿದ್ದರು.

ಕೇಂದ್ರ ವಲಯ ಐಜಿಪಿ ಲಾಬುರಾಮ್ ಸೂಚನೆ ಮೇರೆಗೆ ತಾವರೆಕೆರೆ ಇನ್ಸ್‌ಪೆಕ್ಟರ್ ಮೋಹನ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಈ ವೇಳೆ ಹೊಸಕೋಟೆ ಬಳಿ ಮತ್ತೊಂದು ಕೃತ್ಯವೆಸಗುವ ವೇಳೆ ಪೊಲೀಸರ ಬಲೆಗೆ ಬಿದಿದ್ದರು.


ಆರೋಪಿ ಜೀವನ್ ಬೇಕರಿಯಲ್ಲಿ ತಿಂಡಿಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದ. ಒಂಟಿ ಮಹಿಳೆಯರು ವಾಸಿಸುತ್ತಿದ್ದ ಸ್ಥಳ ಗುರುತಿಸುತ್ತಿದ್ದ ಪತ್ನಿ ಆಶಾ, ಬಳಿಕ ಪತಿ ಜೀವನ್ ಜತೆ ತೆರಳಿ ಕೃತ್ಯವೆಸಗುತ್ತಿದ್ದರು. ಜ್ಯುವೆಲ್ಲರಿ ಅಂಗಡಿಗೆ ತೆರಳಿ ಕಷ್ಟ ಇದೆ ಅಂತಾ ಹೇಳಿ ಚಿನ್ನಾಭರಣ ಮಾರಾಟ ಮಾಡಿ ಬರುತ್ತಿದ್ದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಸದ್ಯ ತಾವರೆಕೆರೆ ಪೊಲೀಸರು ಮಹಜರು ನಡೆಸಿ ಜೈಲಿಗೆ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *