ಮಂಗಳೂರು:(ನ.13) ಪಕ್ಷಿಕೆರೆಯಲ್ಲಿ ಕುಟುಂಬದ ಕೊಲೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ನ ತಾಯಿ ಶ್ಯಾಮಲಾ ಮತ್ತು ಅಕ್ಕ ಕಣ್ಮಣಿಯನ್ನು ಈಗಾಗಲೇ ಪೋಲಿಸರು ಬಂಧಿಸಿದ್ದಾರೆ.
ಪೋಲಿಸ್ ತನಿಖೆಯಲ್ಲಿ ಸ್ಫೋಟಕ ಸತ್ಯಗಳು ಬಯಲಾಗಿವೆ. ಕೃತ್ಯ ಎಸಗಲು ತಾಯಿ ಹಾಗೂ ಅಕ್ಕನ ಚುಚ್ಚು ಮಾತೇ ಕಾರಣ ಎಂದು ತಿಳಿದು ಬಂದಿದೆ. ಪ್ರತಿ ಬಾರಿ ಜಗಳ ಆದಾಗಲೂ ಚುಚ್ಚು ಮಾತಿನಿಂದ ಕಾರ್ತಿಕ್ ನನ್ನು ಹಿಂಸಿಸುತ್ತಿದ್ದರು.
ಕಾರ್ತಿಕ್ ಅಕ್ಕ ಕಣ್ಮಣಿಯ ಗಂಡನ ಹೆಸರಲ್ಲಿ ಪ್ಲ್ಯಾಟ್ ಇತ್ತು. ನೀನು ನಿನ್ನ ಅಕ್ಕನ ಮನೆಯಲ್ಲಿ ವಾಸ ಮಾಡುತ್ತಿದ್ದೀಯಾ, ನೀವು ಬೇರೆ ಕಡೆ ಹೋಗಿ ಮನೆ ಮಾಡಬೇಕು, ನಮಗೆ ಆರ್ಥಿಕವಾಗಿ ನೀವೇ ನೋಡಬೇಕು, ಪ್ರತೀ ಬಾರಿ ಗಲಾಟೆ ಆದಾಗಲೂ ಕಾರ್ತಿಕ್ ತಾಯಿ ಈ ರೀತಿ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಗಲಾಟೆಯಿಂದ ಕಾರ್ತಿಕ್ ಮಾನಸಿಕವಾಗಿ ಬಹಳ ಒತ್ತಡಕ್ಕೆ ಸಿಲುಕಿದ್ದರು. ಹೀಗಾಗಿ ಇಬ್ಬರನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದ್ದೇವೆ, ಇಬ್ಬರ ಹೇಳಿಕೆ ಗಳೂ ಅವರ ಪಾತ್ರ ಇರೋದು ಖಚಿತಪಡಿಸಿದೆ, ಕಾರ್ತಿಕ್ ಮದುವೆಯಾದ ಬಳಿಕ ಆರ್ಥಿಕ ವಾಗಿ ಕಷ್ಟದಲ್ಲಿದ್ದರು. ಆನ್ ಲೈನ್ ಗೇಮಿಂಗ್ ಆಡಿಯೂ ನಷ್ಟ ಅನುಭವಿಸಿದ್ದರು.
ನಷ್ಟ ಆಗಿ ಬಹಳ ಕಡೆ ಕಾರ್ತಿಕ್ ಸಾಲವನ್ನೂ ಮಾಡಿದ್ದರು. ಕೌಟುಂಬಿಕ ಸಮಸ್ಯೆ ಈ ಕೃತ್ಯ ಕ್ಕೆ ಪ್ರಮುಖ ಕಾರಣವಾಗಿದೆ. ಕೃತ್ಯ ನಡೆಯುವ ಮುನ್ನ ಗಂಡ ಹೆಂಡತಿ ನಡುವೆ ಭಾರೀ ಗಲಾಟೆಯಾಗಿದೆ, ಕೋಣೆಯೊಳಗೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು ಎಂದು
ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.