Wed. Nov 20th, 2024

Pakshikere: ಪತ್ನಿ, ಮಗುವನ್ನು ಕೊಂದು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಕಮೋಡ್‌ ನಲ್ಲಿ ಪತ್ತೆಯಾಯ್ತು ಮೊಬೈಲ್!!! – ಬೆಳಕಿಗೆ ಬರುತ್ತಿದೆ ಕಾರ್ತಿಕ್ ಭಟ್ ನ ಅವ್ಯವಹಾರಗಳು.!!

ಪಕ್ಷಿಕೆರೆ: (ನ.13) ಕೆಲ ದಿನಗಳ ಹಿಂದೆ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ತನ್ನ ಮಗು ಹೃದಯ್ (4) ಹಾಗೂ ಪತ್ನಿ ಪ್ರಿಯಾಂಕ (28) ಅವರನ್ನು ಕೊಲೆಗೈದು ತಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ಬೆಳಕಿಗೆ ಬರುತ್ತಿದ್ದು, ಪೊಲೀಸರ ತನಿಖೆಯ ವೇಳೆ ಕಾರ್ತಿಕ್ ಹಾಗೂ ಅವರ ಪತ್ನಿಯ ಮೊಬೈಲ್ ಮನೆಯ ಶೌಚಾಲಯದ ಕಮೋಡ್‌ನಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 🟣ಉಜಿರೆ: ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ “ಔಷಧವಾಗಿ ಆಹಾರ” ಕಾರ್ಯಗಾರ

ಕಾರ್ತಿಕ್ ಹಾಗೂ ಪ್ರಿಯಾಂಕಾ ಇಬ್ಬರೂ ಬಳಸುತ್ತಿದ್ದ ಮೊಬೈಲ್ ಫೋನುಗಳು ಪತ್ತೆಯಾಗಿದ್ದು ಇಬ್ಬರ ಮೊಬೈಲ್‌ಗಳನ್ನೂ ಕಮೋಡ್‌ನಲ್ಲಿ ಹಾಕಿದವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಮೊಬೈಲ್‌ಗಳನ್ನು ತಜ್ಞರ ಪರಿಶೀಲನೆಗೆ ಕಳುಹಿಸಲು ಪೊಲೀಸರು ನಿರ್ಧರಿಸಿದ್ದು ಅದರಿಂದ ಒಂದಷ್ಟು ಮಹತ್ವದ ಸಂಗತಿಗಳು ಹೊರಬರುವ ಸಾಧ್ಯತೆಗಳಿವೆ.


ಇನ್ನು ಮನೆಯಲ್ಲಿ ಗೋಡೆಯಲ್ಲಿ ನೇತು ಹಾಕಿದ್ದ ಗ್ರೂಪ್ ಫೋಟೋದಲ್ಲಿದ್ದ ಕಾರ್ತಿಕ್ ಭಟ್, ಪತ್ನಿ ಪ್ರಿಯಾಂಕಾ ಹಾಗೂ ಮಗುವಿನ ಫೋಟೋಗೆ ಮಸಿ ಬಳಿದವರು ಯಾರೂ ಎಂಬುದು ಇನ್ನೂ ಗೊತ್ತಾಗಿಲ್ಲ. ಪ್ರತಿ ನಿತ್ಯ ಹೊಟೇಲ್‌ನಲ್ಲೇ ಊಟ-ತಿಂಡಿ ಮಾಡುತ್ತಿದ್ದ ಕಾರ್ತಿಕ್-ಪ್ರಿಯಾಂಕಾ ದಂಪತಿ ಮಗುವನ್ನು ಎಲ್‌ ಕೆಜಿಗೆ ಬಿಡಲು ಸುರತ್ಕಲ್‌ಗೆ ಹೋಗುತ್ತಿದ್ದರು. ಪ್ರಿಯಾಂಕಾ ಅಲ್ಲಿನ ಜಿಮ್‌ಗೆ ಹೋಗಿ ಬರುತ್ತಿದ್ದರು. ಅಲ್ಲಿಂದ ಬಂದ ಬಳಿಕ ಮನೆಯ ಕೋಣೆಯಲ್ಲೇ ಇರುತ್ತಿದ್ದರು. ಪ್ರತಿ ನಿತ್ಯ ಬೆಳಗ್ಗೆ ಎಸ್. ಕೋಡಿಯ ಹೊಟೇಲ್‌ಗೆ ತೆರಳಿ ಅಲ್ಲಿ ಕಾಫಿ, ತಿಂಡಿ ಸೇವಿಸಿ ಮನೆಗೆ ಪಾರ್ಸೆಲ್ ತಂದು ಕೋಣೆಯಲ್ಲಿ ಇರುತ್ತಿದ್ದರು.

ಸರಿಯಾಗಿ ಆದಾಯವೂ ಇಲ್ಲದೆ ದೈನಂದಿನ ಖರ್ಚು ನಿಭಾಯಿಸಲು ಹಲವು ಮಂದಿ ಗೆಳೆಯರಲ್ಲಿ ಕಾರ್ತಿಕ್ ಸಾಲ ಕೂಡ ಮಾಡಿದ್ದ. ಕಾರ್ತಿಕ್ ಭಟ್ ತನ್ನ 10 ಪವನ್ ಚಿನ್ನಾಭರಣವನ್ನು ಎಗರಿಸಿದ್ದಾನೆ ಎಂದು ಪಕ್ಷಿಕೆರೆ ಹೊಸಕಾಡು ನಿವಾಸಿ, ಸ್ಥಳೀಯ ಉದ್ಯಮಿ ಮಹಮ್ಮದ್ ಆರೋಪಿಸಿದ್ದಾರೆ. ಪಕ್ಷಿಕೆರೆ ಬ್ಯಾಂಕ್‌ವೊಂದರಲ್ಲಿ ತನ್ನ 10 ಪವನ್ ಚಿನ್ನಾಭರಣವನ್ನು ಅಡವಿಟ್ಟಿದ್ದ ಮಹಮ್ಮದ್ ಅವರು ತನಗೆ ಅಗತ್ಯವಿದ್ದ 1.60 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಇನ್ನೂ ಹೆಚ್ಚಿನ ಸಾಲಕ್ಕಾಗಿ ಅವರು ಪ್ರಯತ್ನದಲ್ಲಿದ್ದರು.


ಈ ವಿಷಯವನ್ನು ಮನಗಂಡ ಕಾರ್ತಿಕ್, ತಾನು ಮ್ಯಾನೇಜರ್ ಆಗಿದ್ದ ಸಹಕಾರಿ ಸಂಘದಲ್ಲಿ ನಿಮ್ಮ ಚಿನ್ನಾಭರಣವನ್ನು ಅಡವಿಟ್ಟರೆ ಹೆಚ್ಚಿನ ಸಾಲ ನೀಡುವುದಾಗಿ ಭರವಸೆ ಕೊಟ್ಟಿದ್ದ. ಅದರಂತೆ ಮಹಮ್ಮದ್ ಅವರು ಪಕ್ಷಿಕೆರೆ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣವನ್ನು ಬಿಡಿಸಿದ್ದರು. ಆ ಚಿನ್ನಾಭರಣವನ್ನು ಕಾರ್ತಿಕ್ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸೊಸೈಟಿಯಲ್ಲಿ ಅಡವಿರಿಸಿ 3.04 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು.


ಕಾರ್ತಿಕ್ ಆತ್ಮಹತ್ಯೆ ಮಾಡಿದ ಕಾರಣ ಸಂಶಯಗೊಂಡ ಮಹಮ್ಮದ್ ಅವರು ಸೊಸೈಟಿಗೆ ತೆರಳಿ ತನ್ನ ಚಿನ್ನಾಭರಣದ ಬಗ್ಗೆ ವಿಚಾರಿಸಿದಾಗ ಅಡವಿಟ್ಟ ನಾಲ್ಕೇ ತಿಂಗಳಲ್ಲಿ ಆ ಚಿನ್ನಾಭರಣ ಬಿಡಿಸಲಾಗಿದೆ ಎಂದು ಸೊಸೈಟಿ ಅಧಿಕಾರಿಗಳು ಮಹಮ್ಮದ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಹಣದ ಕ್ರೋಡೀಕರಣಕ್ಕಾಗಿ ತಾನು ಕೆಲಸ ಮಾಡಿಕೊಂಡಿದ್ದ ಸೊಸೈಟಿಯಲ್ಲೂ ಅವ್ಯವಹಾರ ನಡೆಸಿ ಕೆಲಸದಿಂದಲೇ ವಜಾಗೊಂಡಿದ್ದ ಎಂದು ಹೇಳಲಾಗುತ್ತಿದೆ.


ಮಹಮ್ಮದ್‌ ಅಡವಿರಿಸಿದ್ದ ಚಿನ್ನಾಭರಣದ ಪ್ರಕರಣ ಸೇರಿದಂತೆ ಹಲವು ಅವ್ಯವಹಾರಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಾರ್ತಿಕ್ ತಾನು ಮ್ಯಾನೇಜರ್ ಆಗಿದ್ದ ಸುರತ್ಕಲ್ ಶಾಖೆಯಿಂದ ವಜಾಗೊಂಡಿದ್ದ ಎನ್ನುವುದೂ ಬೆಳಕಿಗೆ ಬಂದಿದೆ.


ಮಹಮ್ಮದ್‌ ಅಡವಿರಿಸಿದ್ದ 10 ಪವನ್ ಚಿನ್ನಾಭರಣವನ್ನು ಮ್ಯಾನೇಜರ್ ಆಗಿದ್ದ ಕಾರ್ತಿಕ್ ಬಿಡಿಸಿಕೊಂಡಿದ್ದ. ಈ ಚಿನ್ನಾಭರಣವನ್ನು ಕಾರ್ತಿಕ್ ಹೆಚ್ಚಿನ ಬೆಲೆಗೆ ಬೇರೆಡೆ ಮಾರಾಟ ಮಾಡಿರಬಹುದು. ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಲು ಆತನೇ ಇಲ್ಲವಾದದ್ದರಿಂದ ಪೊಲೀಸರಿಗೂ ಕಗ್ಗಂಟಾಗಿದ್ದು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *