ಪುತ್ತೂರು:(ನ.13) ಅಂಬಿಕಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಅಭಿಜ್ಞಾನ ಸಾಹಿತ್ಯ ವೇದಿಕೆ ಅಡಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮವು ನ.12 ರಂದು ನಡೆಯಿತು.
ಇದನ್ನೂ ಓದಿ: 🟠ಗುರುವಾಯನಕೆರೆ:(ನ.16 & ನ.17) ಎಕ್ಸೆಲ್ ಪದವಿಪೂರ್ವ ಕಾಲೇಜು ವತಿಯಿಂದ “ಎಕ್ಸೆಲ್ ಪರ್ಬ – 2024”
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಮಾತನಾಡಿ, ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದ್ದು ಎಳವೆಯಲ್ಲಿಯೇ ಮಕ್ಕಳಿಗೆ ಮನೆಯಿಂದಲೇ ಕನ್ನಡ ಭಾಷೆಯನ್ನು ಕಲಿಸುವ ಕೆಲಸ ನಡೆಯಬೇಕು.
ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಕಾಲಘಟ್ಟದಲ್ಲಿಯೂ ಭಾಷೆ ತನ್ನದೇ ಜೀವಂತಿಕೆಯನ್ನು ಉಳಿಸಿದೆ ಎಂದು ಹೇಳಿದ್ದಲ್ಲದೇ, ಮುಂದಿನ ದಿನಗಳಲ್ಲಿ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಾಜೆ ಮಾತನಾಡಿ, ಇಂದು ಕನ್ನಡ ಉಳಿಸುವವರಿಗಿಂತ ಕನ್ನಡ ಪರ ಹೋರಾಟಗಾರರೇ ಅಧಿಕ ಸಂಖ್ಯೆಯಲ್ಲಿದ್ದು, ಕೇವಲ ನಾಮಕಾವಸ್ಥೆಗೆ ಭಾಷೆಯ ಬಗೆಗಿನ ಕಾಳಜಿ ಸಲ್ಲದು ಎಂದರು.
ಕನ್ನಡ ಭಾಷೆ ಇಂಗ್ಲಿಷ್ ಭಾಷೆಯೊಂದಿಗೆ ಬೆಸೆದುಕೊಂಡರೂ ಕನ್ನಡ ಹೀರಿಕೊಳ್ಳುವ ಶಕ್ತಿ ಇದೆ. ಅದು ಬೇರೆ ಯಾವ ಭಾಷೆಗೆ ಇಲ್ಲ ಎಂದು ಹೇಳಿ ಕನ್ನಡದ ಶ್ರೀಮಂತ ಭಾಷಾ ಸಂಪತ್ತಿನ ಬಗ್ಗೆ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದಿಂದ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ತದನಂತರ ವಿತರಿಸಲಾಯಿತು. ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಯಂತಿ.ಪಿ. ಮತ್ತು ಕನ್ನಡ ಉಪನ್ಯಾಸಕ ಗಿರೀಶ್ ಭಟ್ ಕೊವೆತ್ತಂಡ ಉಪಸ್ಥಿತರಿದ್ದರು.
ದ್ವಿತೀಯ ಬಿ.ಎ ವಿದ್ಯಾರ್ಥಿನಿ ಮಾನ್ಯ ಕಾರ್ಯಕ್ರಮ ನಿರೂಪಿಸಿ, ದ್ವಿತೀಯ ಬಿ.ಎ ವಿದ್ಯಾರ್ಥಿ ಅಶ್ವೀತ್ ರೈ ಸ್ವಾಗತಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಸಾಕೇತ್ ವಂದಿಸಿದರು.