ಉಜಿರೆ:(ನ.16) ಯುವಕರೆಲ್ಲ ಒಗ್ಗಟ್ಟಾಗಿ ಒಳ್ಳೆಯ ಕಾರ್ಯ ಮಾಡಿದರೆ ರಾಷ್ಟ್ರಕಟ್ಟುವ ಕೆಲಸ ಸಾಧ್ಯ. ಸಾಮಾಜಿಕ ಕಳಕಳಿಯ ಕಾರ್ಯ ಆರಂಭ ಆದಾಗ ಮಾತ್ರ ಅವೆಲ್ಲ ಸಾಧ್ಯವಾಗುತ್ತದೆ. ಇದಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಂತಹ ಘಟಕಗಳ ಕೈಂಕರ್ಯ ಶ್ಲಾಘನೀಯ. ಶಿಸ್ತು , ಸಮಯ ಪಾಲನೆ ಇತ್ಯಾದಿಗಳು ನಮ್ಮ ಜೀವನವನ್ನು ರೂಪಿಸಲು ಇರುವ ಅಂಶಗಳು.
ಇದನ್ನೂ ಓದಿ: 🟠ಕಿಲ್ಲೂರು: ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಿಲ್ಲೂರಿನ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ
ಅದನ್ನೆಲ್ಲ ಮೈಗೂಡಿಸಿಕೊಳ್ಳಲು ಇಲ್ಲಿ ಅವಕಾಶ ಇದೆ. ಅಷ್ಟು ಮಾತ್ರವಲ್ಲದೇ ನಿಸ್ವಾರ್ಥ ಬದುಕಿಗೆ ಒಂದು ಆಯಾಮ ಕೊಡುತ್ತದೆ. ಒಟ್ಟಾರೆ ನಿಸ್ವಾರ್ಥ ಬದುಕು ಶ್ರೇಷ್ಠ ಎಂದು ಕಿಲ್ಲೂರು ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಂಗಯ್ಯ ನಾಯ್ಕ್ ಹೇಳಿದರು.
ಇವರು ಮಿತ್ತಬಾಗಿಲು ಗ್ರಾಮದ ಕಿಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಾಗೆಯೇ ಮೊಬೈಲ್ ಫೋನ್ ಅದರಲ್ಲೂ ಸಾಮಾಜಿಕ ಜಾಲತಾಣಗಳಿಂದ ದೂರವಿರಿ ಎಂದು ವಿದ್ಯಾರ್ಥಿ ಸ್ವಯಂ ಸೇವಕರಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿದ ಉಜಿರೆಯ ಶ್ರೀ ಧ.ಮಂ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಒಂದು ವಿಶಿಷ್ಠ ಯೋಜನೆಯಾಗಿದ್ದು ಇದರಲ್ಲಿ ಮುಖ್ಯವಾದದ್ದು ವಾರ್ಷಿಕ ವಿಶೇಷ ಶಿಬಿರ. ಶ್ರಮದ ಬೆಲೆಯನ್ನು ತಿಳಿಯಲು , ಸ್ವಚ್ಛತೆಯ ಅರಿವು , ಒಗ್ಗಟ್ಟಿನ ಭಾವನೆ ಮೂಡಲು ಇಂತಹ ಶಿಬಿರಗಳು ಪೂರಕ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೇಶವ ಪಡ್ಕೆ ಹಾಗೂ ಪ್ರಗತಿಪರ ಕೃಷಿಕ ಬಿ. ಕೆ ಸುಬ್ಬರಾವ್ ಇವರ ಗೌರವ ಉಪಸ್ಥಿತಿಯಲ್ಲಿ ಶಿಬಿರ ಸಮಿತಿಯ ಅಧ್ಯಕ್ಷರಾದ ಮೋಹನ್ ಸುವರ್ಣ, ಉಪಾಧ್ಯಕ್ಷ ಸುಧಾಕರ ವಳಚಿಲ ಬೆಟ್ಟು , ಕಾರ್ಯದರ್ಶಿ ರಮೇಶ್ ಪೈಲಾರ್ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತನ್ ಶೆಟ್ಟಿ , ವಿಶೇಷವಾಗಿ ನೆರವು ನೀಡಿದ ಹಳೆ ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಜಯಶ್ರೀ ಹಾಗೂ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ರಜಿಯಾ ಹಾಗೂ
ಮಾರ್ಗದರ್ಶಕ ಹಾಗೂ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಶ್ ಕಲ್ಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಶಿಬಿರ ಸಹಾಯಕರಾದ ಯಾದವ ಕುಲಾಲ್ , ಶಿವಪ್ರಸಾದ್ , ದಾಮೋದರ್ ಹಾಗೂ ಮೋನಕ್ಕ, ಅವರನ್ನು ಹಾಗೂ ರಾ.ಸೇ ಯೋಜನಾ ಘಟಕದ ನಾಯಕರಾದ ಆದಿತ್ಯ ವಿ ಹಾಗೂ ಪ್ರಾಪ್ತಿ ಗೌಡ ಅವರನ್ನು ಗೌರವಿಸಲಾಯಿತು.
ರಾ.ಸೇ ಯೋಜನೆಯ ವತಿಯಿಂದ ನವೀಕರಿಸಿದ ಶಾಲಾ ನಾಮಫಲಕವನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು. ಸ್ವಯಂ ಸೇವಕರಿಗೆ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.
ಸ್ಥಳೀಯ ಶಿಬಿರ ಸಮಿತಿಯ ವತಿಯಿಂದ ಎನ್ನೆಸೆಸ್ ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಅವರನ್ನು ಸನ್ಮಾನಿಸಲಾಯಿತು.
ಶಿಬಿರ ಸಮಿತಿಯ ಅಧ್ಯಕ್ಷರಾದ ಮೋಹನ್ ಸುವರ್ಣ, ಕಾರ್ಯದರ್ಶಿ ರಮೇಶ್ ಪೈಲಾರ್ ಅವರು ಶುಭ ಹಾರೈಸಿದರು.
ಸ್ವಯಂ ಸೇವಕರ ಪರವಾಗಿ ಪ್ರಾಪ್ತಿ ಗೌಡ , ಹರ್ಷಿತಾ ಹಾಗೂ ಶಾಶ್ವಿತ್ ಅವರು ಶಿಬಿರದ ಅನುಭವದ ನುಡಿಗನ್ನಾಡಿದರು. ಸಾಕ್ಷೀ ಬಹುಮಾನಗಳ ಪಟ್ಟಿ ವಾಚಿಸಿದರು. ನಾಯಕ ಆದಿತ್ಯ ವಿ ಶಿಬಿರದ ವರದಿ ವಾಚಿಸಿದರು.
ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಸ್ವಾಗತಿಸಿ , ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ವಂದಿಸಿದರು.
ಹಿರಿಯ ಸ್ವಯಂ ಸೇವಕ ಡಾ.ರಕ್ಷಿತ್ ಅ.ಪ ಹಾಗೂ ಸ್ವಯಂ ಸೇವಕಿ ಮೌಲ್ಯ ನಿರೂಪಿಸಿದರು.