ಬೆಂಗಳೂರು:(ನ.18) ವಿದೇಶದಿಂದ ಅಕ್ರಮವಾಗಿ ಗಾಂಜಾ, ಡ್ರಗ್, ಚಿನ್ನ, ಅಂಬರ್ ಗ್ರೀಸ್ ಹೀಗೆ ಅನೇಕ ಬೆಲೆಬಾಳುವ ವಸ್ತುಗಳನ್ನು ಸಾಗಾಟ ಮಾಡಿ ಪೊಲೀಸರ ಅತಿಥಿಯಾಗ್ತಾರೆ. ಆದರೆ ಇಲ್ಲೊಂದು ಕಡೆ ಜೀವಂತ ಪ್ರಾಣಿಗಳನ್ನು ಸಾಗಿಸಿ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ⭕ಹುಬ್ಬಳ್ಳಿ: ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದ ಅತ್ತಿಗೆಯ ಕತ್ತು ಸೀಳಿದ ಮೈದುನ!!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದೊಡ್ಡ ಪ್ರಮಾಣದ ಅಕ್ರಮ ಪ್ರಾಣಿ ಸಾಗಾಣಿಕೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಕೌಲಾಲಂಪುರದಿಂದ ಬಂದ ವಿಮಾನದಲ್ಲಿ ಬರೋಬ್ಬರಿ 40 ಪೆಟ್ಟಿಗೆಗಳಲ್ಲಿ ವಿವಿಧ ಜೀವಿಗಳ ಸಾಗಾಟವನ್ನು ತಡೆಹಿಡಿದಿದ್ದಾರೆ. ವಿವಿಧ ಜಾತಿಯ ಆಮೆಗಳು, ಹಲ್ಲಿಗಳು ಮತ್ತು ಇಲಿಗಳನ್ನು ಅಡಗಿಸಿಟ್ಟು ತರಲಾಗುತ್ತಿತ್ತು.
ಅಕ್ರಮವಾಗಿ ವಿದೇಶದಿಂದ ಸಾಗಾಟ ಮಾಡುತ್ತಿದ್ದ ಪ್ರಾಣಿಗಳನ್ನು ಕೆಂಪೇಗೌಡ ಏರ್‌ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಣಿಗಳನ್ನು ತಂದಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ ಹಾಗೂ ಕೆಂಪು ಇಲಿ ಸೇರಿದಂತೆ ಟ್ರಾಲಿ ಬ್ಯಾಗ್‌ನಲ್ಲಿ 40 ಬಾಕ್ಸ್ಗಳಲ್ಲಿದ್ದ ವಿವಿಧ ಬಗೆಯ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ.
ಏರ್‌ಪೋರ್ಟ್ನಲ್ಲಿ ಪರಿಶೀಲನೆ ವೇಳೆ ಬಾಕ್ಸ್ನಲ್ಲಿ ಪ್ರಾಣಿಗಳಿರುವುದು ಪತ್ತೆ ಆಗಿದೆ. ಕೌಲಲಾಂಪುರದಿಂದ ವಿಮಾನದಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ತಂದಿದ್ದರು. ಸದ್ಯ ಅಕ್ರಮ ಪ್ರಾಣಿಗಳ ಸಾಗಾಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.