Wed. Nov 20th, 2024

Bengaluru: ಎಲೆಕ್ಟ್ರಿಕ್‌ ವಾಹನ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ – ಅವಘಡದಲ್ಲಿ ಸಜೀವ ದಹನವಾದ ಪ್ರಿಯಾ – ಬರ್ತ್ ಡೇ ಸಂಭ್ರಮ ನಡೆಯಬೇಕಿದ್ದ ಮನೆಯಲ್ಲಿ ಸೂತಕ – ಮಗಳನ್ನು ಕಳೆದುಕೊಂಡ ತಂದೆ ಹೇಳಿದ್ದೇನು?!

ಬೆಂಗಳೂರು: (ನ.20) ಬೆಂಗಳೂರಿನ ಎಲೆಕ್ಟ್ರಿಕ್‌ ವಾಹನ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಶೋರೂಂನೊಳಗಿದ್ದ ಯುವತಿ ಸಜೀವ ದಹನವಾಗಿ ಹೋಗಿದ್ದಾಳೆ.

ಇದನ್ನೂ ಓದಿ: 🟠ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಆಯ್ಕೆ

ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯ ನವರಂಗ್‌ ಬಾರ್‌ ಬಳಿಯ ಗ್ರೀನ್‌ ಸಿಟಿ ಎಲೆಕ್ಟ್ರಿಕ್‌ ವಾಹನ ಶೋರೂಂನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಲೇ ಇಡೀ ಶೋರೂಂ ಹೊತ್ತಿ ಉರಿದಿದೆ.

ಈ ವೇಳೆ ಶೋರೂಂನೊಳಗೆ ಸೇಲ್ಸ್ ಎಕ್ಸಿಕ್ಯುಟಿವ್‌ ಕೆಲಸ ಮಾಡುತ್ತಿದ್ದ ಯುವತಿ ಪ್ರಿಯಾ ಬೆಂಕಿಗಾಹುತಿಯಾಗಿದ್ದಾಳೆ. ಇನ್ನು ಘಟನೆಯಲ್ಲಿ 3 ಯುವಕರು ಪ್ರಾಣಾಪಾಯದಿಂದ ಬಚಾವ್‌ ಆಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಪುನೀತ್‌ ಎಂಬುವವರಿಗೆ ಸೇರಿದ ಈ ಶೋರೂಂನಲ್ಲಿ ಸಂಭವಿಸಿದ ಅಗ್ನಿದುರಂತಕ್ಕೆ ಶಾರ್ಟ್ ಸರ್ಕ್ಯೂಟ್‌ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಪ್ರಿಯಾ ತಂದೆ ಆರ್ಮುಗಂ ಹೇಳಿದ್ದೇನು?

ಬರ್ತ್ ಡೇ ಸಂಭ್ರಮ ನಡೆಯಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಎದುರಾಗಿದೆ. ಇವತ್ತು ಬರ್ತ್ ಡೇ ಇತ್ತು ಸಾರ್.. ಬಟ್ಟೆಯೆಲ್ಲಾ ತಂದಿಟ್ಟಿದ್ವಿ ಸಾರ್, ಕೇಕ್ ತರೋದಕ್ಕೆ ಎಲ್ಲಾ ರೆಡಿ ಮಾಡ್ಕೊಂಡಿದ್ವಿ.. ಆದ್ರೆ ಹಿಂಗಾಗಿದೆ ನಂಬೋಕಾಗ್ತಿಲ್ಲ. ನನ್ನ ಮಗಳು ನಮ್ಮ ಮನೆ ಮಹಾಲಕ್ಷ್ಮಿ ಸಾರ್, ಏನೇನೋ ಕನಸು ಕಂಡಿದ್ಳು..

ಮನೆ ಜವಾಬ್ದಾರಿ ಹೊತ್ತಿದ್ಳು, ಕಂಪನಿ ಕಷ್ಟ ಅಂದಾಗ ಕಂಪನಿಗೋಸ್ಕರ ದುಡಿದ್ಳು, ಇಪ್ಪತ್ತು ಜನ ಇರೋ ಕಂಪನಿಗೆ ಹೆಡ್ ಆಗಿದ್ಳು ಸಾರ್, ಇಪ್ಪತ್ತು ಜನರಲ್ಲಿ ನನ್ನ ಮಗಳು ಮಾತ್ರ ಸತ್ತೋದ್ಳು ಅಂತಿದಾರೆ ಸಾರ್, ಇಪ್ಪತ್ತು ಜನರಲ್ಲಿ ನನ್ನ ಮಗಳು ಮಾತ್ರ ಸತ್ತೋದ್ಳು ಅಂತಿದಾರೆ ಸಾರ್, ಕಂಪನಿಯವರಿಂದ ಒಂದು ಫೋನ್ ಇಲ್ಲ,

ಟಿವಿ ನೋಡಿ ವಿಚಾರ ತಿಳ್ಕೊಂಡ್ವಿ ಸಾರ್, ನಮಗೆ ನ್ಯಾಯ ಬೇಕು ಸಾರ್.. ನಿಮ್ಮೂಲಕ ನಾನು ನ್ಯಾಯ ಕೇಳ್ತೀನಿ, ಮಿನಿಸ್ಟರ್ ಗಳ ಕಡೆಯಿಂದ ನಮಗೆ‌ ನ್ಯಾಯ ಕೊಡಿಸಿ, ಆತನಿಗೆ ಶಿಕ್ಷೆ ಆಗಬೇಕು ಸಾರ್.. ಕಂಪನಿಯವರಿಗೆ ಶಿಕ್ಷೆ ಆಗಬೇಕು ಸಾರ್ ಎಂದು ಮೃತ ಯುವತಿ ತಂದೆ ಆರ್ಮುಗಂ ಹೇಳಿಕೆ ನೀಡಿದ್ದಾರೆ. ಮಗಳನ್ನ ಕಳೆದುಕೊಂಡು ತಂದೆ ಶಾಕ್‌ ನಲ್ಲಿದ್ದಾರೆ.

Leave a Reply

Your email address will not be published. Required fields are marked *