ಉಳ್ಳಾಲ:(ನ.23) ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾದ ಕುಖ್ಯಾತ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಉಳ್ಳಾಲದ ಧರ್ಮನಗರ ನಿವಾಸಿ ದಾವೂದ್ (43)ನನ್ನು ಮಂಗಳೂರು ಸಿಸಿಬಿ ಪೊಲೀಸರ ತಂಡವು ನ.22ರ ಸಂಜೆ ಬಂಧಿಸಿದ್ದಾರೆ.
ಇದನ್ನೂ ಓದಿ: ⭕ಮಂಗಳೂರು : 3 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್, ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದ ವೇಳೆ ಬಂಧಿಸಲಾಗಿದೆ.
ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆ:
ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ನರೇಂದ್ರ ನೇತೃತ್ವದ ಸಿಸಿಬಿ ತಂಡ ದಾವೂದ್ ನನ್ನು ಬಂಧಿಸಲು ಮುಂದಾಗಿದೆ. ಬಂಧನ ಕಾರ್ಯಾಚರಣೆ ವೇಳೆ ದಾವೂದ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಅಧಿಕಾರಿಗಳ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಮುಂದಾಗಿದ್ದಾನೆ. ಹಲ್ಲೆಯಿಂದ ಪಿಎಸ್ ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ. ದಾಳಿಯ ಹೊರತಾಗಿಯೂ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಕ್ರಮಕ್ಕಾಗಿ ದಾವುದ್‌ನನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.
ದಾವೂದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ನರೇಂದ್ರ ಅವರ ದೂರಿನ ಮೇರೆಗೆ ಆರೋಪಿ ದಾವುದ್ ವಿರುದ್ಧ ಸೆಕ್ಷನ್ 352, 109(1), 121(1), 121(2), 115(2), 132, 3(5), ಮತ್ತು 351(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ದಾವೂದ್ ಕೊಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿರುತ್ತಾನೆ. ದಾವೂದ್ ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರ ಸ್ಥಳಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.