ಧರ್ಮಸ್ಥಳ (ನ.26) : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗುತ್ತಿರುವ ಕ್ಷೇತ್ರದ ಲಕ್ಷದೀಪೋತ್ಸವ ಪ್ರಯುಕ್ತ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಆವರಣದಲ್ಲಿ ರಾಜ್ಯಮಟ್ಟದ 45ನೇ ವರ್ಷದ ವಸ್ತುಪ್ರದರ್ಶನಕ್ಕೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಯೂನಿಸೆಫ್ ಹೈದರಾಬಾದ್ ಕಛೇರಿಯ ಮುಖ್ಯಸ್ಥರಾದ ಡಾ. ಝೆಲಾಲೆಮ್ ಬಿರಹಾನು ಟಾಫ್ಸಿ ಅವರು “ಸೈಕಲ್ ಅಗರಬತ್ತಿ”ಯನ್ನು ಬೆಳಗಿಸುವ ಮೂಲಕ ಮಂಗಳವಾರ ಚಾಲನೆ ನೀಡಿದರು.
ಬಳಿಕ ವಸ್ತು ಪ್ರದರ್ಶನಾಲಯದ ಪ್ರತಿ ಮಳಿಗೆಗಳಿಗೆ ಭೇಟಿ ನೀಡಿ ಶುಭ ಹಾರೈಸಿದರು. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವಸ್ತು ಪ್ರದರ್ಶನಾಲಯಕ್ಕೆ ಪ್ರತಿನಿಧಿಗಳು ಆಗಮಿಸಿದ್ದಾರೆ. ಸರ್ಕಾರಿ ಇಲಾಖೆಯ ಮಳಿಗೆಗಳ ಜೊತೆಗೆ ಶಿಕ್ಷಣ ಸಂಸ್ಥೆಗಳು, ಪುಸ್ತಕ ಮಳಿಗೆಗಳು, ಗ್ರಾಮಾಭಿವೃದ್ದಿ, ಸಿರಿ ಉತ್ಪನ್ನ, ವಾಹನ ಪ್ರದರ್ಶನ, ಕೃಷಿ ಯಂತ್ರೋಪಕರಣಗಳು, ಕೈಗಾರಿಕೆ, ಕರಕುಶಲ ವಸ್ತು, ಬ್ಯಾಂಕ್‌ಗಳು, ಜೀವವಿಮೆ ಮಾಹಿತಿ ಮಳಿಗೆ, ಔಷಧಿಗಳು, ತಿಂಡಿ ತಿನಿಸುಗಳು ಸೇರಿದಂತೆ 300ಕ್ಕೂ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳು ವಸ್ತು ಪ್ರದರ್ಶನಾಲಯದಲ್ಲಿ ಗಮನ ಸೆಳೆದವು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಲಕ್ಷದೀಪೋತ್ಸವ ವಿಶೇಷತೆಗಳಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಮಳಿಗೆಯು ಪ್ರಮುಖ ಆಕರ್ಷಣೆಯಾಗಿದ್ದು, ಜಾತ್ರೆಯಲ್ಲಿ ಸಂಭ್ರಮದ ಜೊತೆಗೆ ಮಾಹಿತಿ ನೀಡುವ ಕಾರ್ಯವನ್ನು ವಸ್ತು ಪ್ರದರ್ಶನ ಮಳಿಗೆ ಮಾಡುತ್ತಿದೆ. ಗ್ರಾಮೀಣ ಭಾಗದ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು ಮುಖ್ಯ ವೇದಿಕೆಯಾಗಿದೆ.
ಸರ್ಕಾರಿ ಹಾಗೂ ಬ್ಯಾಂಕ್‌ಗಳ ಮಳಿಗೆಗಳು ಕೂಡ ಇರುವುದರಿಂದ ಜನಸಾಮಾನ್ಯರು ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅನಿಲ್‌ಕುಮಾರ್‌ಎಸ್, ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಪ್ತಸಹಾಯಕ ವೀರುಶೆಟ್ಟಿ, ಸಿರಿಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್.ಜನಾರ್ದನ್, ಉಜಿರೆಯ ಎಸ್‌ಡಿಎಂ ಆಸ್ಪತ್ರೆಯ ಆಡಳಿತಾಧಿಕಾರಿ ಜನಾರ್ಧನ,
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗಡೆ, ಎಸ್‌ಡಿಎಂ ಸ್ನಾತಕೋತ್ತರಕೇಂದ್ರದ ಡೀನ್ ಡಾ.ವಿಶ್ವನಾಥ ಪಿ, ಎಲ್.ಐ.ಸಿ. ಬಂಟ್ವಾಳ ವಿಭಾಗದ ಪ್ರಬಂಧಕ ಸತೀಶ್‌ಕುಮಾರ್ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
300ಕ್ಕೂ ಅಧಿಕ ಮಳಿಗೆಗಳು ವಸ್ತುಪ್ರದರ್ಶನ ಸಂಕೀರ್ಣದಲ್ಲಿ ರಾಜ್ಯದ ನಾನಾಭಾಗಗಳಿಂದ ಆಗಮಿಸಿದ 300ಕ್ಕೂ ಅಧಿಕ ಮಳಿಗೆಗಳಿವೆ.
ಉಜಿರೆಯ ರತ್ನಮಾನಸದ ಯತೀಶ್‌ಕೆ. ಬಳಂಜ ಹಾಗೂ ರವಿಚಂದ್ರವಿ. ಅವರು ಮಳಿಗೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ಇಲಾಖೆಯ ಮಳಿಗೆಗಳು, ಬ್ಯಾಂಕ್ ಮಾಹಿತಿ ನೀಡುವ ಮಳಿಗೆಗಳು, ಧಾರ್ಮಿಕ ಮಾಹಿತಿ ನೀಡುವ ಮಳಿಗೆಗಳು, ಪುಸ್ತಕ ಮಳಿಗೆಗಳು, ಕೃಷಿ ಯಂತ್ರೋಪಕರಣಗಳು, ಜೊತೆಯಲ್ಲಿ ಶಿಕ್ಷಣ ಸಂಸ್ಥೆಗಳು, ಗ್ರಾಮಾಭಿವೃದ್ದಿ, ತಿಂಡಿ ತಿನಿಸುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳಿವೆ.
ಶ್ರೀ ಕ್ಷೇತ್ರದ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಮಂಜುವಾಣಿ, ನಿರಂತರ, ಸಿರಿ ಗ್ರಾಮೋದ್ಯೋಗ, ಗ್ರಾಮಾಭಿವೃದ್ದಿ ಯೋಜನೆ, ಧರ್ಮೋತ್ಥಾನ ಟ್ರಸ್ಟ್, ರುಡ್ ಸೆಟ್ ಸಂಸ್ಥೆಯ ಮಾಹಿತಿ ಮತ್ತು ವಸ್ತು ಮಾರಾಟ ಮಳಿಗೆಗಳು. ಅಂಚೆ, ಕೃಷಿ, ತೋಟಗಾರಿಕಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯಂತಹ ಸರ್ಕಾರಿ ಮಳಿಗೆಗಳು. ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್, ಜೀವವಿಮಾ ಮುಂತಾದ ಬ್ಯಾಂಕ್ ಮಳಿಗೆಗಳ ಜೊತೆಗೆ ಆಹಾರ ಮಳಿಗೆ ಹಾಗೂ ಗೃಹ ಉತ್ಪನ್ನ ಮಳಿಗೆಗಳು ಕೂಡ ಈ ಬಾರಿಯ ವಸ್ತು ಪ್ರದರ್ಶನದಲ್ಲಿವೆ.