ಉಜಿರೆ:(ನ.26) ಪರಂಪರೆಯ ಶ್ರೇಷ್ಠ ಮೌಲ್ಯಗಳ ಆಧಾರದ ಮೇಲೆ ಆಧುನಿಕ ಯುಗದ ಸಾಮಾಜಿಕ ಬೆಳವಣಿಗೆಗೆ ಪೂರಕವಾದ ಸರ್ವಾಂಗೀಣ ಅಭ್ಯುದಯದ ಮಾದರಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕೊಡುಗೆಗಳನ್ನಾಗಿ ನೀಡಿದ್ದಾರೆ ಎಂದು ಮೂಡಬಿದ್ರೆ ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ⭕ಹಿರಿಯಡ್ಕ : ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ
ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು.
ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯ ಒಳಗೇ ಲಭ್ಯವಾಗುವ ಸಾಂಪ್ರದಾಯಿಕ ಶ್ರೇಷ್ಠ ಮೌಲ್ಯಗಳ ಆಧಾರದಲ್ಲಿ ಬದಲಾವಣೆಯನ್ನು ಸಾಧ್ಯವಾಗಿಸಿದವರು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು. ಆಧುನಿಕ ಮತ್ತು ಡಿಜಿಟಲ್‌ಯುಗದಲ್ಲಿ ಮಹತ್ವದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತ್ಯಂತರದ ಮೌಲಿಕ ಕೊಡುಗೆಗಳ ಮೂಲಕ ಗಮನ ಸೆಳೆದಿದ್ದಾರೆ. ಸುಧಾರಣಾವಾದಿ ಅಭಿವೃದ್ಧಿ ಯೋಜನೆಯ ಮಾದರಿಗಳನ್ನು ರೂಪಿಸಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ತಜ್ಞರ ಹೊಳಹುಗಳನ್ನೂ ಮೀರಿದ ಉನ್ನತ ಸುಧಾರಣೆಗಳನ್ನು ವೀರೇಂದ್ರ ಹೆಗ್ಗಡೆಯವರು ತಮ್ಮ ದೂರದೃಷ್ಟಿಯ ಯೋಜನೆಗಳ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಧಾರ್ಮಿಕ ಶ್ರದ್ಧೆಯೊಂದಿಗೆ ಆಧುನಿಕ ಸುಧಾರಣಾ ಕ್ರಮಗಳ ಸಮರ್ಥ ಅನುಷ್ಠಾನ ಮಾಡಿ ನಾಡಿನ ಲಕ್ಷಾಂತರ ಜನರ ಬದುಕು ಹಸನಾಗಲು ವೀರೇಂದ್ರ ಹೆಗ್ಗಡೆ ಅವರು ಕಾರಣರಾಗಿದ್ದಾರೆ. ಪರಂಪರೆಯೊಂದಿಗೆ ಆಧುನಿಕತೆಯನ್ನು ಸಮ್ಮಿಲನಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ ಮಾಡಿದ್ದಾರೆ. ಅವರ ಜೀವನಗಾಥೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಯುವಜನರಿಗೆ ಮಾದರಿಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಸ್ವ- ಉದ್ಯೋಗ ಮತ್ತು ರುಡ್‌ಸೆಟ್‌ನಂತಹ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಕಳೆದ ಐದು ದಶಕಗಳಿಂದ ಸಮಾಜದ ಉದ್ಧಾರಕ್ಕಾಗಿ ವೀರೇಂದ್ರ ಹೆಗ್ಗಡೆ ಶ್ರಮಿಸುತ್ತಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಇತರ ನಗರಗಳನ್ನು ಆಶ್ರಯಿಸುವ ಅನಿವಾರ್ಯತೆಯಿದ್ದಾಗ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಶಿಕ್ಷಣ ಕ್ರಾಂತಿಗೆ ಕಾರಣರಾಗಿದ್ದಾರೆ. ಇಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು
ದೇಶದ ಸರ್ವಶ್ರೇಷ್ಟ ಶಿಕ್ಷಣ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದೆ. ಯೋಗ ಮತ್ತು ಭಾರತೀಯ ವೈದ್ಯ ಶಿಕ್ಷಣಕ್ಕೆ ಹೆಗ್ಗಡೆಯವರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಖಾವಂದರು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರದೆ ಸಾಮಾನ್ಯ ಜನರ ಸಮಗ್ರ ಶ್ರೇಯಾಭಿವೃದ್ದಿಗೆ ಕಾರಣವಾಗುವ ಯೋಜನೆಗಳನ್ನು ರೂಪಿಸಿದ್ದಾರೆ. ಅವರ ಆದರ್ಶಗಳು ಮತ್ತು ಸಮಾಜಮುಖಿ ಕೆಲಸಗಳು ಎಲ್ಲರಿಗೂ ಜೀವನ ಪಾಠ ಎಂದರು.
ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಮ್ಯಾನೇಜ್ಮೆಂಟ್ ಸಿಇಒ ಪೂರನ್ ವರ್ಮ ಮಾತನಾಡಿ, ವೀರೇಂದ್ರ ಹೆಗ್ಗಡೆಯವರು ಸರಳ ಜೀವನ ಕ್ರಮದ ಮೂಲಕ ಮಾದರಿಯಾಗಿದ್ದಾರೆ. ಉನ್ನತ ಹಂತದಲ್ಲಿದ್ದರೂ ಕೂಡ ಅವರು ಎಲ್ಲರನ್ನು ಸಮಾನರಾಗಿ ಕಾಣುತ್ತಾರೆ. ಅವರಲ್ಲಿನ ದೈವಿಕ ಶಕ್ತಿಯಿಂದ ಸಾಮಾನ್ಯರಿಗೆ ಸಾಧ್ಯವಾಗದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ ಹೆಗ್ಡೆ, ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಆಲೋಚನೆ, ದೃಢ ನಿರ್ಧಾರ, ದಕ್ಷತೆ ಮತ್ತು ಶಿಸ್ತಿನ ಜೀವನ ಕ್ರಮಗಳು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯ ಎಂದರು.
ಕಾರ್ಯಕ್ರಮದಲ್ಲಿ ಉಜಿರೆ ಎಸ್‌ಡಿಎಂ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ. ಶಶಿಶೇಖರ್ ಎನ್ ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ಧನ್ಯವಾದ ಸಲ್ಲಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.