Wed. Nov 27th, 2024

Dharmasthala: ಲಕ್ಷದೀಪೋತ್ಸವದಲ್ಲಿ ಭರತನಾಟ್ಯ ನೃತ್ಯ ವೈಭವ

ಧರ್ಮಸ್ಥಳ:(ನ.27) ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಮಂಗಳವಾರ ವಸ್ತು ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಕಣ್ಮನ ಸೆಳೆವ ಭರತನಾಟ್ಯ ಪ್ರಸ್ತುತಗೊಂಡಿತು.

ಇದನ್ನೂ ಓದಿ: 💠ಬೆಳ್ತಂಗಡಿ : ತಾಲೂಕು ಮಟ್ಟದ ಇಲಾಖಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ

ಧರ್ಮಸ್ಥಳದ ವಿದುಷಿ ಚೈತ್ರಾ ಸತ್ಯಕುಮಾರ್ ಶಾಸ್ತ್ರೀಯ ನೃತ್ಯವು ನಾಟ್ಯಾಧಿಪತಿ ನಟರಾಜನ ಆರಾಧನೆಯೊಂದಿಗೆ ಆರಂಭವಾಯಿತು. ಗಣೇಶ ಸ್ತುತಿಯೊಂದಿಗಿನ ಸ್ವಾಗತ ನೃತ್ಯದ ಮೂಲಕ ಅನಘಾ, ಅನನ್ಯ ಹೆಬ್ಬಾರ್, ಚೈತ್ರಾ ಸತ್ಯ ಕುಮಾರ್ ತಂಡ ಗಮನ ಸೆಳೆದರು.

ಪುರಂದರ ದಾಸ ವಿರಚಿತ ‘ ಚಂದ್ರಚೂಡ’ ಹಾಡಿಗೆ ಚಂದ್ರ ಚೂಡನಾಗಿ ರಾರಾಜಿಸುವ ಪಾರ್ವತಿಯ ರಮಣನು ವಿಷವನ್ನು ಕುಡಿದು ಲೋಕ ಕಲ್ಯಾಣ ಗೈದ ಸ್ವಾಮಿ ನಿನಗೆ ಶರಣು ಎಂದು ಅನನ್ಯ, ಶ್ರೀಯಸಿ, ಸ್ಪಂದನ, ಮಾನ್ಯ, ರಿಷಿಕಾ ನರ್ತಿಸಿದರು.

ಬ್ರಹ್ಮ ಮತ್ತು ವಿಷ್ಣುವಿನಿಂದ ಪೂಜಿಸಲ್ಪಡುವ, ನಂದಿಯನ್ನು ವಾಹನನಾಗಿಸಿದವನು, ತ್ರಿಶೂಲಧಾರಿ, ನಾಟ್ಯ ಮತ್ತು ಸಂಗೀತವನ್ನು ಪ್ರೀತಿಸುವ ಶಿವನನ್ನು ವರ್ಣಿಸುವ ನೃತ್ಯಕ್ಕೆ ಅನಘ, ಅನ್ವಿತಾ, ಜಾಹ್ನವಿ, ಕುಸುಮಿತ, ಜಿಯಾ, ಶ್ರಾವ್ಯ ಹೆಜ್ಜೆ ಹಾಕಿದರು.

ಶಿವನ ವಾಮ ಭಾಗವನ್ನು ಪಾರ್ವತಿ ಅಲಂಕರಿಸಿ, ಒಂದೇ ದೇಹದಲ್ಲಿ ಶಿವಶಕ್ತಿಯರು ಒಂದಾಗಿ ಅರ್ಧನಾರೀಶ್ವರಾದ ಪರಿಯನ್ನು ನೃತ್ಯದ ಮೂಲಕ ವಿದುಷಿ ಶ್ರೀಮತಿ ಚೈತ್ರಾ ಸತ್ಯ ಕುಮಾರ್ ವರ್ಣಿಸಿದರು.

ಸಮೃದ್ಧಿ ಮತ್ತು ಸಂಪತ್ತನ್ನು ನೀಡುವ ಲಕ್ಷ್ಮಿಯನ್ನು ಮನೆಗೆ ಬರುವಂತೆ ಕರೆಯುವ ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ ಕೀರ್ತನೆ ಆಧರಿಸಿ ಸನ, ಅವನಿ , ಪ್ರಣಮ್ಯ, ನೇಹಾ, ಸಾನ್ವಿ ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸಿತು.

ವಿಷ್ಣುವಿನ ದಶಾವತಾರಗಳನ್ನು ಬಗೆ ಬಗೆಯಾಗಿ ತೆರೆದಿಡುವ ನಾರಾಯಣ ಹರಿ ಮದಲೋಹಿತ ಪ್ರಸಂಗವನ್ನು ಭವನ್ಯ, ಪ್ರತೀಕ್ಷಾ, ನಕ್ಷಾ, ಸಮೀಕ್ಷಾ, ಆತ್ಮಿ ಅಭಿನಯಿಸಿದರು.

ನಳಪಾಕ ಶ್ರೀ ಅಣ್ಣಯ್ಯ, ಅಮ್ಮನವರ ಜನಪ್ರಿಯ ಗೀತೆಯಾದ ‘ಬ್ರಹ್ಮಮೊಕೇಟೆ ಗೀತೆ’ ಆಧರಿಸಿ ಜಾಹ್ನವಿ, ಶ್ರಾವ್ಯ, ಕುಸುಮಿತ, ಅನ್ವಿತಾ, ಜಿಯಾ, ಅನಘ ನೃತ್ಯ ಪ್ರದರ್ಶಿಸಿದರು. ನಾವು ಜೀವಿಸಲು ಅವಶ್ಯವಿರುವ ಗಾಳಿ ನೀರು ಭೂಮಿ ಅಷ್ಟೇ ಅಲ್ಲದೆ ಆ ಪರಮಾತ್ಮನು ಸರ್ವರಿಗೂ ಒಬ್ಬನೇ ಎಂಬುದನ್ನು ನೃತ್ಯದ ಮೂಲಕ ಪ್ರೇಕ್ಷಕರಿಗೆ ತಿಳಿಸಿದರು.

ಆನಂದ್ ಆಚಾರ್ಯರ ಶ್ರೀ ಕೃಷ್ಣ ಮತ್ತು ಯಶೋದೆಯ ನಡುವಿನ ಭಾಂದವ್ಯವನ್ನು ವರ್ಣಿಸುವ ಮಧುರವಾದ ಕೀರ್ತನೆಗೆ ಅನನ್ಯ, ಅವನಿ, ಸನ, ಸ್ಪಂದನ, ಪ್ರಣಮ್ಯ ಮಾನ್ಯ, ಸಾನ್ವಿ, ರಿಷಿಕಾ, ನೇಹಾ ಹಾಗೂ ಶ್ರಿಯಸಿ ಹೆಜ್ಜೆ ಹಾಕಿದರು.

ಕರ್ನಾಟಕದ ಸಾಂಪ್ರದಾಯಿಕ ನೃತ್ಯಗಳಲ್ಲಿ ಒಂದಾದ ಭಾರತದ ಪಶ್ಚಿಮ ಕರಾವಳಿಯ ಪ್ರಸಿದ್ಧ ನೃತ್ಯವಾಗಿರುವ ಕೋಲಾಟಕ್ಕೆ ಗೆಜ್ಜೆ ಮಾತನಾಡುತ್ತಾವೋ ಎಂದು ಅನಘ, ಅನ್ವಿತಾ, ಜಿಯಾ, ಕುಸುಮಿತ, ಶ್ರಾವ್ಯ ಸಭಿಕರನ್ನು ರಂಜಿಸಿದರು.

ಕುವೆಂಪು ವಿರಚಿತ ಭಾವಗೀತಾತ್ಮಕ ‘ಇಳಿದು ಬಾ ತಾಯಿ’ ಸಾಲುಗಳಿಗೆ ನೃತ್ಯದೊಂದಿಗೆ ಜೀವ ತುಂಬಿದವರು ವಿದುಷಿ ಶ್ರೀಮತಿ ಚೈತ್ರಾ ಸತ್ಯ ಕುಮಾರ್ ಮತ್ತು ಅವರ ಸರ್ವ ಶಿಷ್ಯ ವೃಂದದವರು.

Leave a Reply

Your email address will not be published. Required fields are marked *