ಕಲಬುರಗಿ (ನ.27) : ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಶುಶ್ರೂಷಕಿಯರ (ನರ್ಸ್) ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಅಪಹರಿಸಿದ ಕೆಲವೇ ಗಂಟೆಗಳಲ್ಲಿ ಮಗು ಮತ್ತೆ ತಾಯಿಯ ಮಡಿಲು ಸೇರುವಂತಾಗಿದೆ. ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಹಾಗೂ ಕಸ್ತೂರಿ ದಂಪತಿಯ ಶಿಶುವನ್ನು ಅಪಹರಿಸಲಾಗಿತ್ತು. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: 🟠ಮಂಗಳೂರು: ನಗ್ರಿ ಮಹಾಬಲ ರೈ ಯವರಿಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ
ಈ ಕುರಿತು ನಾಲ್ಕು ವಿಶೇಷ ತನಿಖೆ ತಂಡ ರಚನೆ ಮಾಡಲಾಗಿತ್ತು. ಪೊಲೀಸರು ತ್ವರಿತ ಗತಿಯಲ್ಲಿ ತನಿಖೆ ನಡೆಸಿ ಮಗುವನ್ನು ಪತ್ತೆ ಹಚ್ಚಿದ್ದಾರೆ.
ಬುಧುವಾರ ನಸುಕಿನ ವೇಳೆ ಸ್ವತಃ ಕಮಿಷನರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಗುವನ್ನು ತಾಯಿ ಕಸ್ತೂರಿಯವರಿಗೆ ಒಪ್ಪಿಸಿ ಬಂದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಗ್ಗೆ ವೈದ್ಯಕೀಯ ಸಚಿವ ಡಾಕ್ಟರ್ ಶರಣ್ ಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ತಾಯಿಗೆ ಸಾಂತ್ವನ ಹೇಳಿದ್ದರು. ಅಲ್ಲದೆ ಶೀಘ್ರವಾಗಿ ಮಗುವನ್ನು ಪತ್ತೆ ಹಚ್ಚಿ ಮರಳಿಸುವುದಾಗಿ ಅಭಯ ನೀಡಿದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ನಾನಾ ಹಂತಗಳಲ್ಲಿ ತನಿಖೆ, ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಣೆ ಮಾಡಿದೆ.
ಪ್ರಕರಣದ ಹಿನ್ನೆಲೆ:
ಕಸ್ತೂರಿ ಎಂಬವರು ಸೋಮವಾರ (ನ. 25) ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸಂಜೆ ನರ್ಸ್ ವೇಷದಲ್ಲಿ ಸಂಪೂರ್ಣ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಮಹಿಳೆಯರು ರಕ್ತ ತಪಾಸಣೆ ಮಾಡಬೇಕು ಮಗು ಕರೆದುಕೊಂಡು ಬನ್ನಿ ಎಂದು ಹೇಳಿದ್ದರು. ಹೀಗಾಗಿ, ಕಸ್ತೂರಿ ಅವರ ಸಂಬಂಧಿ ರಕ್ತ ತಪಾಸಣೆಗಾಗಿ ಮಗುವನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಮಹಿಳೆಯರು ಮಗುವನ್ನು ನಮಗೆ ಕೊಡಿ ಎಂದಿದ್ದರು. ನಂತರ, ಮಗುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.
ಈ ವಿಷಯ ಗೊತ್ತಾದ ಕೂಡಲೇ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳಿದ್ದಲ್ಲದೆ, ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಅದರಂತೆ, ಮಗು ಈಗ ಅಮ್ಮನ ಮಡಿಲು ಸೇರಿದೆ.