Wed. Nov 27th, 2024

Mangaluru: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಸರಕಾರಿ ಲೇಡಿಗೋಶನ್ ಆಸತ್ರೆಯಲ್ಲಿ ತನ್ನ ಮಗು ಮಾರಾಟವಾಗುತ್ತಿದೆ” ವರದಿ ಸಂಪೂರ್ಣ ಸುಳ್ಳು ; ಆಸ್ಪತ್ರೆ ಸ್ಪಷ್ಟನೆ

ಮಂಗಳೂರು:(ನ.27) ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾದ್ಯಮಗಳಲ್ಲಿ ಹರಿದಾಡುತ್ತಿರುವ ಭವ್ಯ ಎನ್ನು ಮಹಿಳೆ ‘ಸರಕಾರಿ ಲೇಡಿಗೋಶನ್ ಆಸತ್ರೆಯಲ್ಲಿ ತನ್ನ ಮಗು ಮಾರಾಟವಾಗುತ್ತಿದೆ’ ವರದಿ ಸಂಪೂರ್ಣ ಸುಳ್ಳು ಎಂದು ಲೇಡಿಗೋಶನ್ ಆಸ್ಪತ್ರೆ ವೈದ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: 🔴ಮಂಗಳೂರು: ಯುವ ಉದ್ಯಮಿ ಕುಸುಮಾಧರ ರವರಿಗೆ “ಬಿಜಿಎಸ್ ಕರಾವಳಿ ರತ್ನ” ಪ್ರಶಸ್ತಿ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಯ ವೈದ್ಯಕೀಯ ಅಧೀಕ್ಷಕರು 2024 ಆಗಸ್ಟ್ ತಿಂಗಳ 18 ರಂದು ಪೂರ್ವಾಹ್ನ ಗಂಟೆ 9.58ಕ್ಕೆ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಭವ್ಯ W/o ನಾಗರಾಜ್ ಎನ್ನುವ ಮಹಿಳೆ ಹೆಣ್ಣುಮಗುವಿಗೆ ಜನ್ಮವಿತ್ತಿರುತ್ತಾರೆ.

ತದನಂತರ ಮಗುವಿಗೆ ಒಂದು ಕಣ್ಣು ಗುಡ್ಡೆ ಇಲ್ಲದಿರುವುದನ್ನು ತಜ್ಞರುಗಳು ಆಕೆಗೆ ತಿಳಿಸಿದ ಸಂದರ್ಭದಲ್ಲಿ ಮಹಿಳೆ ಶಿಶುವು ತನ್ನದಲ್ಲವೆಂದು ಆಕೆ ನಿರಾಕರಿಸಿರುತ್ತಾರೆ. ಮಾತ್ರವಲ್ಲ ತನ್ನ ಮಗುವನ್ನು ಆಸ್ಪತ್ರೆಯ ಸಿಬ್ಬಂದಿಗಳು ಅದಲು ಬದಲು ಮಾಡಿರುತ್ತಾರೆ ಎಂದು ಸುಳ್ಳು ಆರೋಪವನ್ನು ಹೊರಿಸಿರುತ್ತಾರೆ.

ನಂತರದ ದಿನಗಳಲ್ಲಿ ಸದ್ರಿ ವಿಚಾರದಲ್ಲಿ ಪೋಲಿಸ್ ತನಿಖೆ ನಡೆದು ಗೌರವಾನ್ವಿತ ನ್ಯಾಯಾಧೀಶರವರ ದಿವ್ಯ ಉಪಸ್ಥಿತಿಯಲ್ಲಿ DNA ಪರೀಕ್ಷೆಯನ್ನು ಮಾಡುವ ಸಲುವಾಗಿ ಪ್ರಕ್ರಿಯೆಯನ್ನು ನಡೆಸಲಾಗಿದ್ದು, DNA ಪರೀಕ್ಷೆಯ ವರದಿಯನ್ನು ನೇರವಾಗಿ ತನಿಖಾಧಿಕಾರಿಗಳ ಮೂಲಕ ಗೌರವಾನ್ವಿತ ನ್ಯಾಯಾಲಯಕ್ಕೆ ಸಂಬಂಧಿತರು ಸಮರ್ಪಿಸಿರುತ್ತಾರೆ. ಸದ್ರಿ ಮಹಿಳೆಯ ಶಿಶುವು ದಕ್ಷಿಣಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿರುತ್ತದೆ.

ಇತ್ತೀಚಿನ ಎರಡು ದಿನಗಳಲ್ಲಿ ಸದ್ರಿ ಮಹಿಳೆಯು ತನ್ನ ಶಿಶುವನ್ನು ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿಗಳು ಮಾರಾಟ ಮಾಡಿರುತ್ತಾರೆ ಎಂದು ಮಾನಹಾನಿಕರವಾದ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸುತ್ತಾ, ಸಮಾಜದಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ.

ಅಲ್ಲದೆ ಹೆರಿಗೆ ಮತ್ತು ಸ್ತ್ರೀರೋಗ ಸಂಬಂಧಿ ವಿಚಾರದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸರಕಾರಿ ಸ್ವಾಮ್ಯದ ಸರಕಾರಿ, ಲೇಡಿಗೋಶನ್ ಆಸ್ಪತ್ರೆಗೆ ಕಳಂಕವನ್ನು ತರುವ ವಿಚಾರಗಳು ಖೇದಕರವಾಗಿದೆ. ಸದ್ರಿ ಪ್ರಕರಣವು ನ್ಯಾಯಾಲಯದ ಪರಾಮರ್ಶೆಯ ಹಂತದಲ್ಲಿರುವ ಈ ಸಂದರ್ಭದಲ್ಲಿ ನ್ಯಾಯಾಲಯದ ತೀರ್ಪನ್ನು ಗೌರವಪೂರ್ವಕವಾಗಿ ನಿರೀಕ್ಷಿಸುತ್ತಿದ್ದೇವೆ.

ಆದರೂ ಸದ್ರಿ ಮಹಿಳೆಯು ಘನತೆವೆತ್ತ ಸರಕಾರಿ ಲೇಡಿಗೋಶನ್ ಆಸತ್ರೆಯ ಬಗ್ಗೆ ಮಾಡಿರುವ ಆರೋಪವು ಸಂಪೂರ್ಣವಾಗಿ ನಿರಾಧಾರವಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *