Thu. Nov 28th, 2024

Ullal: ಕೊಲ್ಯದ ಜಾಯ್ ಲ್ಯಾಂಡ್, ಕೋಟೆಕಾರುವಿನ ಸ್ಟೆಲ್ಲಾ ಮೇರೀಸ್ ಶಾಲೆಗಳಿಗೆ ಕನ್ನ! – ಸಿಸಿಟಿವಿ ಕ್ಯಾಮೆರಾ ತಿರುಚಿ ಬೀಗ ಮುರಿದ ಚಾಲಾಕಿ ಕಳ್ಳರು – ಕಚೇರಿಯೊಳಗೆ ತಡಕಾಟ, ಮಕ್ಕಳ ಪಿಕ್ನಿಕ್ ಶುಲ್ಕದ ನಗದು ದೋಚಿ ಪರಾರಿ

ಉಳ್ಳಾಲ: (ನ.28) ಕೊಲ್ಯದ ಸಂತ ಜೋಸೆಫರ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಕನ್ನಡ ಮಾಧ್ಯಮ ಶಾಲೆಗಳಿಗೆ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದ್ದು ,ಸಿಸಿಟಿವಿ ಕ್ಯಾಮೆರಾವನ್ನು ತಿರುಚಿ ಬೀಗ ಒಡೆದು‌ ಒಳ ನುಗ್ಗಿದ ಕಳ್ಳರು ಕಚೇರಿಯನ್ನೆಲ್ಲಾ ತಡಕಾಡಿದ್ದು,ನಗದು ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ⭕ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಮೃತ್ಯು!!

ಕೊಲ್ಯ ಜಾಯ್ ಲ್ಯಾಂಡ್ ಮತ್ತು ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗಳಲ್ಲಿ ಕಳ್ಳತನ ನಡೆದಿದೆ. ಎರಡೂ ಶಾಲೆಗಳಲ್ಲೂ ಸಿಸಿಟಿವಿ ಅಳವಡಿಸಲಾಗಿದ್ದು, ಕಳ್ಳರು ಕ್ಯಾಮೆರಾಗಳನ್ನು ಬೇರೆ ದಿಕ್ಕಿಗೆ ತಿರುಚಿ ಚಾಲಾಕಿತನ ಮೆರೆದಿದ್ದಾರೆ.


ಕೊಲ್ಯ ಜಾಯ್ ಲ್ಯಾಂಡ್ ಶಾಲೆಗೆ ಮೂರನೇ ಬಾರಿ ಕಳ್ಳರು ಕನ್ನ ಹಾಕಿದ್ದಾರೆ. ಈ ಹಿಂದೆಯೂ ಎರಡು ಬಾರಿ ಶಾಲೆಗೆ ಕಳ್ಳರು ನುಗ್ಗಿದ್ದು ನಗದು ಕಳವುಗೈದಿದ್ದರು.ಈ ಸಲ ಸಿಸಿಟಿವಿ ಕ್ಯಾಮೆರಾ ತಿರುಚಿ ಒಳ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕಚೇರಿ,ಕಬಾಟುಗಳ ಬೀಗ ಒಡೆದು ತಡಕಾಡಿದ್ದು ವಿದ್ಯಾರ್ಥಿಗಳಿಂದ ಪಿಕ್ನಿಕ್ ಗಾಗಿ ಸಂಗ್ರಹಿಸಿದ್ದ ಸುಮಾರು 26,000 ರೂಪಾಯಿ ನಗದನ್ನ ಎಗರಿಸಿ ಪರಾರಿಯಾಗಿದ್ದಾರೆ.

ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಗೂ ಬುಧವಾರ ಮುಂಜಾನೆ 4.30 ಗಂಟೆ ವೇಳೆಗೆ ಕನ್ನ ಹಾಕಿದ ಕಳ್ಳನೋರ್ವನು ಸಿಸಿಟಿವಿ ಕ್ಯಾಮರಕ್ಕೆ ಮುಖ ಕಾಣದಿರಲು ಮ್ಯಾಟನ್ನು ಅಡ್ಡ ಹಿಡಿದು ಮುನ್ನುಗ್ಗುತ್ತಿರುವ ದೃಶ್ಯವು ಸಿಸಿಟಿವಿ ಯಲ್ಲಿ ದಾಖಲಾಗಿದೆ. ಸಿಸಿಟಿವಿ ಕ್ಯಾಮರ ತಿರುಚಿ ಕಚೇರಿ ,ಸ್ಟಾಪ್ ರೂಂನ ಕಬಾಟುಗಳನ್ನ ಒಡೆದು ತಡಕಾಡಿದ ಕಳ್ಳನು ಪ್ರಾಂಶುಪಾಲರ ಕೋಣೆಯಲ್ಲಿದ್ದ ಸಿಕ್ಕ 3,000 ರೂಪಾಯಿ ನಗದನ್ನು ಕದ್ದೊಯ್ದಿದ್ದಾನೆ.

ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎರಡೂ ಶಾಲೆಗಳಲ್ಲೂ ಏಕಕಾಲದಲ್ಲಿ‌ ಕಳ್ಳತನ ನಡೆದಿದ್ದು, ಓರ್ವನೇ ಕಳ್ಳ ಕೈಚಳಕ ತೋರಿದ್ದಾನೋ ಅಥವಾ ತಂಡ ಶಾಮೀಲಾಗಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮರ್ಪಕ ಬೀಟ್ ಪೊಲೀಸಿಂಗ್ ನಡೆಯದೆ ಇರೋದರಿಂದ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿದೆಯೆಂಬ ಆರೋಪಗಳು ಕೇಳಿ ಬಂದಿವೆ.

Leave a Reply

Your email address will not be published. Required fields are marked *