ಬೆಳ್ತಂಗಡಿ:(ನ.29) ಕರಾವಳಿ ಜಿಲ್ಲೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದು ಈಗ ಬದಲಾಗಿ ಕೋಮು ಸಂಘರ್ಷದ ಜಿಲ್ಲೆಯಾಗಿ ಕುಖ್ಯಾತಿ ಪಡೆದಿದೆ. ಆದ್ದರಿಂದ ಯಾರದ್ದೋ ಸ್ವಾರ್ಥಿಗಳ ದ್ವೇಷ ಭಾಷಣದ ಹಿಂದೆ ಬೀಳದೆ ಜಾತಿಭೇದವಿಲ್ಲದೆ ಎಲ್ಲರಿಗೂ ಸಹಾಯ ಮಾಡುವ ಇಂತಹಾ ಸತ್ಕಾರ್ಯಗಳ ವೇದಿಕೆಯನ್ನು ಕಂಡು ಪ್ರಚೋದನೆ ಪಡೆಯೋಣ ಎಂದು ಸುನ್ನೀ ಯುವಜನ ಸಂಘದ (ಎಸ್‌ವೈಎಸ್) ಕಾರ್ಕಳ ಝೋನ್ ಕಾರ್ಯದರ್ಶಿ ಮೌಲಾನಾ ಹುಸೈನ್ ಸಅದಿ ಹೊಸ್ಮಾರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: 🟠ಉಜಿರೆ : ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ “ರಬ್ಬರ್ ಟ್ಯಾಪಿಂಗ್ ” ತರಬೇತಿಯ ಸಮಾರೋಪ ಸಮಾರಂಭ
ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ವತಿಯಿಂದ ಬೆಳ್ತಂಗಡಿ ಸುವರ್ಣ ಆರ್ಕೆಡ್ ಸಭಾಂಗಣದಲ್ಲಿ ನ.28 ರಂದು ನಡೆದ ವಿದ್ಯಾರ್ಥಿ ವೇತನ, ಅಶಕ್ತರಿಗೆ ನೆರವು, ಆಹಾರ ಮತ್ತು ಔಷಧ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಸಂಪತ್ತು ಬಂದಾಗ ನಮ್ಮ ಪತ್ನಿ, ಮಕ್ಕಳು, ಸಮುದಾಯ ಎಂಬ ಆಲೋಚನೆ ಮಾತ್ರ ಕೆಲವರಿಗೆ ಬರುತ್ತದೆ. ಆದರೆ ಅಶ್ರಫ್ ಬಜ್ಪೆ ಅವರು ಅದೆಲ್ಲವನ್ನೂ ಮೀರಿ ಇಡೀ ಸಮಾಜದ ಪರಿಕಲ್ಪನೆಯಡಿ ಎಲ್ಲಾ ಜಾತಿ ಧರ್ಮದವರಿಗೂ ನೆರವು ನೀಡುತ್ತಿರುವುದು ಶ್ರೇಷ್ಠ ಕಾರ್ಯ. ರಾಜ್ಯದಲ್ಲಿ ಎಲ್ಲರಿಗೂ ನೆರವು ನೀಡುವ ಕೆಲಸ ಸರಕಾರ ಮಾಡುತ್ತಿದೆ. ಮಹಿಳೆಯರು ಶಕ್ತಿವಂತರಾದರೆ ದೇಶ ಶಕ್ತಿವಂತವಾಗುತ್ತದೆ ಎಂದರು.
ಮೋಟಿವೇಷನ್ ಟ್ರೈನರ್ ರಫೀಕ್ ಮಾಸ್ಟರ್ ಮಾತನಾಡಿ, ಎಲ್ಲಾ ಕೈಗಳಿಗಿಂತ ದಾನ ಮಾಡುವ ಕೈ ಶ್ರೇಷ್ಠ. ಆವಶ್ಯಕತೆ ಇರುವವರಿಗೆ ಮತ್ತು ಹಸಿದವರಿಗೆ ನೀಡುವ ಸಹಾಯ ಸ್ವರ್ಗದ ಬಾಗಿಲಿನವರೆಗೆ ತಂದು ನಿಲ್ಲಿಸಬಹುದು ಎಂದರು.
ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ ಮಠ, ಪತ್ರಕರ್ತರಾದ ಅಶ್ರಫ್ ಆಲಿಕುಂಞಿ ಮುಂಡಾಜೆ ಮತ್ತು ಮನೋಹರ ಬಳೆಂಜ, ಶರೀಫ್ ಮಲ್ನಾಡ್ ಕಳಸ, ಝುಬೈರ್ ಮಂಗಳೂರು, ಉದ್ಯಮಿ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ ಮೊದಲಾದವರು ಶುಭಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಮುಹಮ್ಮದ್ ಅಶ್ರಫ್ ಬಜ್ಪೆ ಮಾತನಾಡಿ, ಎಳೆಯ ಪ್ರಾಯದಲ್ಲೇ ತಾಯಿಯನ್ನು ಕಳೆದುಕೊಂಡ ದುಃಖವನ್ನು ಈ ರೀತಿ ಪರರಿಗೆ ಸಹಾಯ ಮಾಡುವ ಮೂಲಕ ಕಳೆಯುತ್ತಿದ್ದೇನೆ. ಹಸಿವಿನ ಮತ್ತು ಬಡತನದ ಬೇಗೆಯಿಂದ ಬೆಂದ ಕರಾಳ ದಿನಗಳನ್ನು ನೆನಪಿಸುತ್ತಾ ಅರ್ಹರ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದ್ದೇನೆ. ನಮ್ಮ ದುಡಿಮೆಯ ಒಂದಂಶ ಸಮಾಜಕ್ಕೆ ಕೊಟ್ಟು ಜವಾಬ್ಧಾರಿ ತೊರುತ್ತಿದ್ದೇನೆ. ಇದರಲ್ಲಿ ಆತ್ಮತೃಪ್ತಿ ಪಡೆದಿದ್ದೇನೆ ಎಂದರು.
ವೇದಿಕೆಯಲ್ಲಿ ಸುವರ್ಣ ಆರ್ಕೆಡ್ ಮಾಲಕ ನಾಣ್ಯಪ್ಪ ಪೂಜಾರಿ, ಅಬ್ದುಲ್ ಖಾದರ್, ಲೆತೀಫ್ ಉಣ್ಣಾಲು, ಜುನೈದ್ ಅಝ್ಹರಿ ಉಣ್ಣಾಲು, ಇಬ್ರಾಹಿಂ ಮುಸ್ಲಿಯಾರ್, ಆಸಿಫ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂ ಇಂಡಿಯಾ ಚಾರಿಟೇಬಲ್ ಟ್ರಸ್ಟ್ (ರಿ.) ಕಚೇರಿ ವ್ಯವಸ್ಥಾಪಕ ಇಸ್ಮಾಯಿಲ್ ಗುರುವಾಯನಕೆರೆ ಅವರನ್ನು ಗೌರವಿಸಲಾಯಿತು.
ಸಮದ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.