Tue. Apr 15th, 2025

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ 92ನೇ ಸಾಹಿತ್ಯ ಸಮ್ಮೇಳನ

ಧರ್ಮಸ್ಥಳ: ಕನ್ನಡದ ಹಿರಿಮೆಯ ಅರಿವಿನ ಕೊರತೆಯಿಂದ ಭಾಷೆ ಸೊರಗುತ್ತಿದೆ. ಸಾಹಿತ್ಯದ ಕೃತಿಗಳು ಅಗಾಧವಾಗಿ
ಮಾರುಕಟ್ಟೆಗೆ ಬರುತ್ತಿದೆ. ಆದರೆ ಅದರ ಸಾರ ಮತ್ತು ಮೌಲಿಕ ಶ್ರೀಮಂತಿಕೆಯ ಕುರಿತಾಗಿ ಮೌಲ್ಯಮಾಪನವಾಗಬೇಕಿದೆ
ಶತಾವಧಾನಿ ಆರ್. ಗಣೇಶ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 💠ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ವೈಭವದಿಂದ ಜರುಗಿದ ಗೌರಿಮಾರುಕಟ್ಟೆ ಉತ್ಸವ


ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ 92ನೇ ಸಾಹಿತ್ಯ ಸಮ್ಮೇಳನ
ಉದ್ಘಾಟಿಸಿ ಅವರು ಮಾತನಾಡಿದರು.


ದೈನಂದಿನ ಜೀವನದಲ್ಲಿ ಕನ್ನಡ ಭಾಷೆಗೆ ಸಂಧಿಗ್ಧತೆ ಒದಗಿ ಬಂದಿದೆ. ಯುವ ಪೀಳಿಗೆಯು ಕನ್ನಡವನ್ನು ಶಾಸ್ತ್ರೋಕ್ತವಾಗಿ
ಅಭ್ಯಾಸವನ್ನು ಮಾಡಿ, ಅರ್ಥೈಸುವ ಕೌಶಲ್ಯ ಕ್ಷೀಣಿಸಿದೆ. ಭಾಷೆಯ ಒಳಿತಿನ ದೃಷ್ಟಿಯಿಂದ ಸಾಹಿತ್ಯದ ಪ್ರಾಮಾಣಿಕ
ಮೌಲ್ಯಮಾಪನವಾಗಬೇಕು. ವಿಶ್ವದ ಯಾವುದೇ ಭಾಷೆಯ ಸಾಹಿತ್ಯದ ಪ್ರಕಾರಗಳನ್ನು ತನ್ನದಾಗಿಸುವ ಸಾಮರ್ಥ್ಯ
ಕನ್ನಡಕ್ಕಿದೆ ಎಂದರು.


ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಯುವಕರು ಸಾಹಿತ್ಯದ ಕಡೆಗೆ
ತೆರೆದುಕೊಳ್ಳುವ ಉದ್ದೇಶದಿಂದ ಇದು ಸ್ವಾಗತಾರ್ಹ. ಸಾಹಿತ್ಯದ ಕೃತಿಗಳು ಅಗಾಧವಾಗಿ ಮಾರುಕಟ್ಟೆಗೆ ಬರುತ್ತಿದೆ. ಆದರೆ
ಕನ್ನಡ ಸಾಹಿತ್ಯದ ಶ್ರಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಯುವ ಪೀಳಿಗೆ ಮಾಡಬೇಕಾಗಿದೆ.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿ, ಸಾಹಿತ್ಯವು ಧರ್ಮವನ್ನು
ನಿರ್ದೇಶಿಸಿ, ಪೋಷಿಸಿ, ವಿಮರ್ಶಿಸುವ ಮೂಲಕ ಸುಧಾರಣೆಯ ಕೆಲಸಗಳಿಗೆ ಕಾರಣವಾಗುತ್ತದೆ ಸಾಹಿತ್ಯ ಮತ್ತು ಧರ್ಮವು ಒಂದರಿಂದ ಇನ್ನೊಂದು ವಿಮುಖವಾಗದೆ ಪರಸ್ಪರ ಪೂರಕವಾಗಿರಬೇಕು ಪ್ರೇಮ ಮತ್ತು ಐಕ್ಯತೆಯನ್ನು ಎಲ್ಲರೊಳಗೆ ಮೂಡಿಸಿ ಸರಿ ದಾರಿಯಲ್ಲಿ ನಡೆಸುತ್ತದೆ ಎಂದು ಅವರು ನುಡಿದರು.


ಹೊಸಕಾಲದ ಕನ್ನಡ ಸಾಹಿತ್ಯದಲ್ಲಿ ವಿನೂತನ ಪ್ರಯೋಗಗಳಾಗುತ್ತಿವೆ. ಆದರೆ ಪರಂಪರೆಯನ್ನು ಉಳಿಸಿಕೊಳ್ಳುವ
ಪ್ರಯತ್ನಗಳು ಕಡಿಮೆಯಿದೆ. ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಶಾಸ್ತ್ರೀಯ ಅಧ್ಯಯನಗಳು ನಡೆಯಬೇಕು. ಛಂದಸ್ಸು, ಕಾವ್ಯಮೀಮಾಂಸೆ, ನಿಘಂಟು ಶಾಸ್ತ್ರ ಗ್ರಂಥ ಮತ್ತು ಹಸ್ತಪ್ರತಿಗಳ ಶಾಸ್ತ್ರೀಯ ಅಧ್ಯಯನದಿಂದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬಹುದು ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸಾಹಿತ್ಯವು ಮನುಷ್ಯನ ಸಂವೇದನೆಗಳನ್ನು
ಮಾನವೀಯಗೊಳಿಸಿ ಪರಂಪರೆಯ ಮೌಲ್ಯಗಳ ಮೂಲಕ ಅರಿವಿನ ಬೆಳಕನ್ನು ನೀಡುತ್ತದೆ. ಸಾಹಿತ್ಯ ಅಂತರಂಗವನ್ನು
ಸೂಕ್ಷ್ಮವಾಗಿ ಶೋಧಿಸುತ್ತದೆ. ಜನರ ಹೃದಯಗಳನ್ನು ಬೆಸೆದು ಮನುಷ್ಯತ್ವವನ್ನು ಜಾಗೃತಗೊಳಿಸುತ್ತದೆ. ಡಿಜಿಟಲ್
ಯುಗದಲ್ಲಿ ಸಾಹಿತ್ಯದ ವ್ಯಾಪ್ತಿ ವಿಸ್ತಾರವಾಗಿದೆ. ಹೊಸ ಬರಹಗಾರರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು
ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿಸಿಕೊಂಡಿದ್ಧಾರೆ. ಹೀಗಿದ್ದರೂ ಸಾಹಿತ್ಯದ ಗುರಿ ಮಾನವೀಯತೆ, ಶಾಂತಿ ಮತ್ತು
ಸೌಹಾರ್ದತೆಯನ್ನು ಮೂಡಿಸುವುದಾಗಿದೆ ಎಂದರು.


ಸಮ್ಮೇಳನದಲ್ಲಿ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಮಾರ್ಗೋಪಾಯಗಳು ಎಂಬ ವಿಷಯದ ಕುರಿತಾಗಿ ಡಾ.ಬಿ.ವಿ ವಸಂತ ಕುಮಾರ್‌, ಸ್ತ್ರೀಯರ ಸ್ವಂತ ಸುಖಕ್ಕೆ ಸಾಹಿತ್ಯದ ಅರಿವಿನ ಅವಶ್ಯಕತೆಯ ಕುರಿತಾಗಿ ಡಾ. ಪ್ರಮೀಳಾ ಮಾಧವ್‌ ಮತ್ತು ತಾಂತ್ರಿಕ ಯುಗದಲ್ಲಿ ಸಾಹಿತ್ಯದ ಅವಶ್ಯಕತೆ ಮತ್ತು ಅದನ್ನು ಜನಪ್ರಿಯಗೊಳಿಸುವ ಬಗ್ಗೆ ಪ್ರೊ. ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು.


ವೀರೇಂದ್ರ ಹೆಗ್ಗಡೆಯವರ ಕುರಿತು ಸೋನಿಯಾ ಯಶೋವರ್ಮ ರಚಿಸಿರುವ ಗುಣಗಣಿ – ಗುಣರತ್ನಗಳ ಮಣಿ ಮತ್ತು
ಪುಷ್ಪದಂತ ಅವರ ಉಪರತ್ನಗಳು – ನವರತ್ನಗಳು ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಡಿ.
ಶ್ರೇಯಸ್‌ ಕುಮಾರ್‌ ಹಾಗೂ ಡಾ. ಸತೀಶ್ಚಂದ್ರ ಸನ್ಮಾನಪತ್ರ ಓದಿದರು. ಡಾ. ಶೋಕ್‌ ಕುಮಾರ್‌ ವಂದಿಸಿದರು. ಡಾ.
ದಿವಾಕರ ಕೊಕ್ಕಡ ನಿರೂಪಿಸಿದರು.

Leave a Reply

Your email address will not be published. Required fields are marked *