Thu. Dec 5th, 2024

Bengaluru: ಪದೇ ಪದೇ ದೈವಾರಾಧನೆಗೆ ಅವಮಾನ – ಪಂಜುರ್ಲಿ ದೈವದ ವೇಷ – ಜಮೀರ್ ಅಹ್ಮದ್ ಕೈ ಹಿಡಿದು ಹೆಜ್ಜೆ ಹಾಕಿದ ವೇಷಧಾರಿಗಳು!!

ಬೆಂಗಳೂರು:(ಡಿ.3) ಕಾಂತಾರ ಸಿನೆಮಾ ಬಿಡುಗಡೆಯಾಗಿ ದೇಶ- ವಿದೇಶದಲ್ಲಿ ಸದ್ದು ಮಾಡಿದ ಬಳಿಕ ತುಳುನಾಡಿನ ದೈವಾರಾಧನೆ ವ್ಯಾಪಕವಾಗಿ ದೇಶದ ಮೂಲೆ ಮೂಲೆಗೂ ತಲುಪುದರ ಜೊತೆಗೆ ಅವಮಾನ, ದೈವಗಳ ರೀತಿ ಆವೇಶ ಬಂದು ಕುಣಿಯುವುದು, ಅಣಕಿಸುವುದರ ಮೂಲಕ ತುಳುನಾಡಿನ ಜನರಿಗೆ ನೋವು ಹಾಗೂ ದೈವ ಭಕ್ತರ ಆಕ್ರೋಶಕ್ಕೂ ಕಾರಣವಾಗಿದ್ದು ಮಾತ್ರ ಕಹಿಸತ್ಯ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದೆ. ಸದ್ಯ ಕಾಂತಾರ ಚಿತ್ರದ ರೀತಿಯಲ್ಲೇ ಎರಡು ಪಂಜುರ್ಲಿ ದೈವಗಳ ಪಾತ್ರಗಳನ್ನು ಸೃಷ್ಟಿಸಿ, ಸಚಿವ ಜಮೀರ್ ಅಹ್ಮದ್ ಅವರನ್ನು ಅಪ್ಪಿಕೊಂಡು ಕೈಹಿಡಿದು ಸಾಗುವಂತೆ ಮಾಡಿದ ಘಟನೆ ನಡೆದಿದ್ದು, ಮತ್ತೆ ದೈವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Chaitra Kundapura: ದೊಡ್ಮನೆಯಿಂದ ನೇರವಾಗಿ ಕೋರ್ಟ್‌ಗೆ ಹಾಜರಾದ ಚೈತ್ರಾ!!

ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ನ.30ರಂದು ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂತಾರ ಚಿತ್ರದ ರೀತಿಯಲ್ಲೇ ಎರಡು ಪಂಜುರ್ಲಿ ದೈವಗಳ ಪಾತ್ರಗಳನ್ನು ಸೃಷ್ಟಿಸಿ, ಸಚಿವ ಜಮೀರ್ ಅಹ್ಮದ್ ಅವರನ್ನು ದೈವಗಳು ಅಪ್ಪಿಕೊಂಡು ಕೈಹಿಡಿದು ಸಾಗುವಂತೆ ಚಿತ್ರಿಸಲಾಗಿದ್ದು, ಅದಕ್ಕೆ ಕಾಂತಾರ ಚಿತ್ರದ ಸಂಗೀತವನ್ನು ಜೋಡಿಸಲಾಗಿದೆ. ಪಂಜುರ್ಲಿ ದೈವದಂತೆ ವೇಷ ಧರಿಸಿದ ಇಬ್ಬರು ಜಮೀರ್ ಅವರನ್ನು ಕೈಹಿಡಿದು ಮೇಲಕ್ಕೆತ್ತಿ ತಮ್ಮ ನಾಯಕ ಎಂದು ತೋರಿಸುತ್ತಿರುವ ರೀತಿಯಲ್ಲಿ ದೃಶ್ಯಗಳು ಇವೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಭಾರೀ ವಿರೋಧ ಕೇಳಿಬಂದಿದೆ. ಸ್ವತಃ ಜಮೀರ್ ಅಹ್ಮದ್ ಹೆಸರಿನಲ್ಲಿ ಇರುವ ಫೇಸ್ಟುಕ್ ಪೇಜ್ ನಲ್ಲಿ ಈ ವಿಡಿಯೋ ಹಾಕಲಾಗಿದೆ. ವಿಡಿಯೋವನ್ನು ಇತರ ಕೆಲವು ಫೇಸ್ಟುಕ್ ಪೇಜ್ ಗಳಲ್ಲಿ ಹಂಚಲಾಗಿದ್ದು, ಈ ರೀತಿ ಮಾಡಿದ್ದು ಎಷ್ಟು ಸರಿ, ಇದು ದೈವಾರಾಧನೆಯ ಅಣಕ ಅಲ್ಲವೇ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಪದೇ ಪದೇ ತುಳುನಾಡಿನ ಜನರ ಭಾವನೆಗೆ ಧಕ್ಕೆ ತರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೈವಾರಾಧನೆ ಎನ್ನುವುದು ತುಳುನಾಡಿನ ಪವಿತ್ರ ಆರಾಧನಾ ಸಂಪ್ರದಾಯ, ಇದರ ಬಗ್ಗೆ ಅರಿವಿಲ್ಲದವರು ವೇಷ ಧರಿಸಿ ಅಣಕಿಸುವ ಕೃತ್ಯ ಮಾಡುತ್ತಿದ್ದಾರೆ. ದೈವಗಳ ವೇಷ ಧರಿಸಿ ಕುಣಿಯುವುದು, ಅದೇ ರೀತಿ ಅನುಕರಿಸುತ್ತಿರುವುದರಿಂದ ಭಾವನೆಗಳಿಗೆ ಪೆಟ್ಟು ಬಿದ್ದಿದೆ. ಈ ಬಗ್ಗೆ ತಕ್ಷಣ ಗಂಭೀರ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಅಭಿಪ್ರಾಯ ಪಟ್ಟಿದ್ದಾರೆ.

ಕಾಂತಾರ ಸಿನಿಮಾ ಬಂದ ಬಳಿಕ ಇದೇ ರೀತಿ ದೈವಗಳ ವೇಷ ಧರಿಸಿ ಕುಣಿಯುವ ಹಾಗೂ ಪ್ರಮುಖ ಆಕರ್ಷಣೆಗಾಗಿ ಚಿತ್ರಗಳನ್ನು ಬಳಸುವ ಸನ್ನಿವೇಶಗಳು ನಡೆಯುತ್ತಲೇ ಇದೆ. ಇದೀಗ ಒಬ್ಬ ರಾಜಕಾರಣಿಯ ಪ್ರಚಾರಕ್ಕೆ ಇತಂಹ ಘಟನೆ ಮರುಕಳಿಸಿರುವುದು ನಿಜಕ್ಕೂ ವಿಷಾದನೀಯ ವಿಚಾರ, ಘಟನೆ ಬಗ್ಗೆ ವಿರೋಧ, ಟೀಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *