ಕೇರಳ:(ಡಿ.3) ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳದಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನಲೆ ಇದೀಗ ಶಬರಿಮಲೆಗೆ ತೆರಳಲು ಭಕ್ತರ ಮೇಲೂ ಮಳೆ ಸಂಕಷ್ಟ ತಂದಿದೆ.
ಇದನ್ನೂ ಓದಿ: Chikkodi: ವಾಟ್ಸಾಪ್ ಸ್ಟೇಟಸ್‌ಗೆ ಪ್ರೇಯಸಿಯ ಫೋಟೋ ಹಾಕಿದ ಪ್ರಿಯಕರ
ಶಬರಿಮಲೆ ಪರಿಸರದಲ್ಲೂ ಶನಿವಾರ ಆರಂಭವಾದ ಮಳೆ ಸುರಿಯುತ್ತಲೇ ಇದೆ. ಕರ್ನಾಟಕ ಸೇರಿ ವಿವಿಧ ಜಿಲ್ಲೆಗಳಿಂದ ಶಬರಿಮಲೆಗೆ ತೆರಳಿದ್ದ ನೂರಾರು ಯಾತ್ರಿಕರು ಭಾರೀ ಮಳೆಗೆ ಸಿಲುಕಿಹಾಕಿಕೊಂಡಿದ್ದಾರೆ. ಇನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.
ಭೂಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅರಣ್ಯ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅರಣ್ಯದ ದಾರಿ ಮೂಲಕ ಕಾಲ್ನಡಿಗೆಯಲ್ಲಿ ಬರುವ ಯಾತ್ರಿಕರಿಗೆ ಕರಿಮಲ, ಪುಲ್ಲುಮೇಡು ದಾರಿಯಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ. ಶಬರಿಮಲೆ ಯಾತ್ರಿಕರ ಸುರಕ್ಷತೆ ದೃಷ್ಟಿಯಿಂದ ಅಳುತಕ್ಕಡವುನಿಂದ ಪಂಪಾವರೆಗಿನ ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಚಾರಣ ನಿಷೇಧಿಸಲಾಗಿದೆ.
ಈಗಾಗಲೇ ಅರಣ್ಯ ಮಾರ್ಗದ ಮೂಲಕ ಆಗಮಿಸಿದ್ದ ಭಕ್ತರನ್ನು ವಿಶೇಷ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಪಂಪಾಗೆ ಕರೆದೊಯ್ಯಲಾಗಿದೆ. ಪುಲ್ಲುಮೇಡುವಿನಿಂದ ಶಬರಿಮಲೆಗೆ 6 ಕಿ.ಮೀ ದೂರವಿದ್ದು, ಈ ಅರಣ್ಯ ದಾರಿಯಲ್ಲಿ ದಟ್ಟ ಮಂಜು ಆವರಿಸಿದೆ. ತೀವ್ರ ಮಳೆಯಿಂದಾಗಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ.
ಶಬರಿಮಲೆ ಪರಿಸರದಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದೆ. ತಕ್ಷಣದ ಯಾವುದೇ ಅಪಾಯ ಇಲ್ಲವಾಗಿದ್ದರೂ, ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಅಪಾಯ ಸಾಧ್ಯತೆಗಳನ್ನು ಪರಿಗಣಿಸಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಎರುಮೇಲಿಯಲ್ಲಿ ಮಣ್ಣು ಕುಸಿದು ಬಿದ್ದಿದ್ದ ಪ್ರದೇಶವನ್ನು ತೆರವುಗೊಳಿಸಲಾಗಿದ್ದು, ಮತ್ತೆ ಸಂಚಾರ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.