ಸುಬ್ರಹ್ಮಣ್ಯ:(ಡಿ.3) ಫೆಂಗಲ್ ಚಂಡಮಾರುತ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಹೈ ಅಲರ್ಟ್ ಮಾಡಲಾಗಿದ್ದು ಪ್ರವಾಸಿಗರು ಕುಮಾರಧಾರಾ ನದಿಗೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: 🛑ಕೇರಳ: ಶಬರಿಮಲೆಯಲ್ಲಿ ಭಾರೀ ಮಳೆ
ಫೆಂಗಲ್ ಚಂಡಮಾರುತ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಪವಿತ್ರ ತೀರ್ಥ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೈ ಅಲರ್ಟ್ ಮಾಡಲಾಗಿದೆ.
ಪ್ರವಾಸಿಗರು ಕುಮಾರಧಾರಾ ನದಿಗೆ ಇಳಿಯಬಾರದು ಎಂದು ದೇವಸ್ಥಾನ ಆಡಳಿತ ಮಂಡಳಿಯಿಂದ ಸೂಚನೆ ನೀಡಲಾಗಿದೆ. ಕುಕ್ಕೆ ಜಾತ್ರೆಯ ಕಾರಣ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತಾಧಿಗಳು ಆಗಮಿಸುತ್ತಿದ್ದಾರೆ.
ಪುಣ್ಯಸ್ನಾನ ನೆರವೇರಿಸಲು ಸಹಜವಾಗಿ ಕುಮಾರಧಾರಾ ನದಿಗೆ ಭಕ್ತರು ಇಳಿಯುತ್ತಾರೆ. ಪುತ್ತೂರು ಉಪ ಆಯುಕ್ತ ಜುಬಿನ್ ಮೊಹಪಾತ್ರ ಅವರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಈ ಸೂಚನೆ ನೀಡಿದೆ.
ಕರಾವಳಿಯಲ್ಲಿ ಕಳೆದ ಕೆಲದಿನಗಳಿಂದ ನೀರಿನಲ್ಲಿ ಅನೇಕ ಅನಾಹುತಗಳು ನಡೆದು ಅನೇಕ ಜೀವಹಾನಿಗಳಾಗಿದ್ದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.