ಪುತ್ತೂರು:(ಡಿ.4) ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಜಂಟಿ ಆಶ್ರಯದಲ್ಲಿ ದ್ವಿತೀಯ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಧರ್ಮ ಸಂಗಮ, ಧಾರ್ಮಿಕ ಸಭೆ ಡಿ.28 ಹಾಗೂ 29 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಪುತ್ತೂರು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಇದನ್ನೂ ಓದಿ: ಉಪ್ಪಿನಂಗಡಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಯುವಕನ ಮೃತದೇಹ ಪತ್ತೆ!!!
ಅವರು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಈಗಾಗಲೇ ಉಚಿತ ವೈದ್ಯಕೀಯ ಸೇವೆ, ಬಡವರಿಗೆ ಮನೆ ಹಸ್ತಾಂತರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತಗೆ ಧರ್ಮ ಜಾಗೃತಿ ಉಂಟು ಮಾಡುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಒಟ್ಟಾರೆಯಾಗಿ ಕಳೆದ ಬಾರಿ ಸುಮಾರು 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ವಿನಿಯೋಗಿಸಲಾಗಿದೆ ಎಂದು ಹೇಳಿದರು.
ಸನಾತನ ಹಿಂದೂ ಸಮಾಜದ ಅಧಃಪಥನದತ್ತ ಸಾಗಲು ಪ್ರಯತ್ನಗಳು ನಡೆಯುತ್ತಿದ್ದು, ಶ್ರೀನಿವಾಸ ಕಲ್ಯಾಣದ ಜತೆಗೆ ಹಿಂದೂ ಸಮಾಜದ ಕಲ್ಯಾಣ ಆಗಬೇಕು ಎಂದ ಮಹದಾಸೆಯಿಂದ ಈ ಪುಣ್ಯ ಕಾರ್ಯಕ್ರಮವನ್ನು ಹಮ್ಕಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಹಲವಾರು ಮಂದಿಗೆ ತಿರುಪತಿ ಕ್ಷೇತ್ರ ದರ್ಶನ ಕಷ್ಟ ಎಂಬುದನ್ನು ಅರಿತು ಶ್ರೀನಿವಾದ ದೇವರನ್ನು ಇಲ್ಲಿಗೆ ಕರೆತಂದು ಕಲ್ಯಾಣೋತ್ಸವ ಮಾಡಿ ಈ ಪುಣ್ಯ ಕಾರ್ಯವನ್ನು ಕಣ್ತುಂಬ ಕಾಣುವ ಅವಕಾಶವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಡಿ.27 ಶುಕ್ರವಾರ ಸಂಜೆ 4 ಗಂಟೆಗೆ ಪುತ್ತೂರು ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆ ತನಕ ಹೊರೆಕಾಣಿಕೆ ಮೆರವಣಿಗೆ ನಡೆದು ಸಮರ್ಪಣೆಯಾಗಲಿದೆ. ಡಿ.28 ಶನಿವಾರ ಸಂಜೆ 4 ರಿಂದ ಬೊಳುವಾರಿನಲ್ಲಿ ಶ್ರೀ ದೇವರನ್ನು ಬರಮಾಡಿಕೊಂಡು ವೈಭವದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಸಂಜೆ 5.30 ರಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ‘ಈಶ ಮಂಟಪಕ್ಕೆ’ಶ್ರದ್ಧಾಭಕ್ತಿ ಪೂರ್ವಕ ಸ್ವಾಗತ ನೀಡಲಾಗುವುದು ಎಂದು ತಿಳಿಸಿದರು.
ಸಂಜೆ 6 ರಿಂದ ನಡೆಯುವ ಧರ್ಮ ಸಂಗಮ ಧಾರ್ಮಿಕ ಸಭೆಯಲ್ಲಿ ಉಡುಪಿ ಪೇಜಾವರ ಮಠದೆ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಅರಕಲಗೂಡು ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ, ವಿಟ್ಲ ಯೋಗೀಶ್ವರ ಮಠದ ಶ್ರೀ ಯೋಗೇ ಶ್ರದ್ಧಾನಂದ ಜೀ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಶ್ರೀ ಕೃಷ್ಣ ಗುರೂಜಿ, ಬೆಳಾಲು ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ಅರಿಕೋಡಿ ದಿವ್ಯ ಉಪಸ್ಥಿತರಿದ್ದು, ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ಪುತ್ತೂರು ಗಾನಸಿರಿ ಕಲಾ ಕೇಂದ್ರದ ಕಿರಣ್ಕುಮಾರ್ ಪುತ್ತೂರು ಬಳಗದಿಂದ ಭಕ್ತಿ ಗಾನಸುಧೆ ನಡೆದು ರಾತ್ರಿ 8.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 9 ರಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ‘ಪುದರ್ ದೀತಿಜಿ’ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಡಿ.29 ಭಾನುವಾರ ಬೆಳಿಗ್ಗೆ 5.30 ರಿಂದ ಸುಪ್ರಭಾತ ಪೂಜಾ ಸೇವೆ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 2.30 ರಿಂದ ಪ್ರತಿಷ್ಠಿತ ಭಜನಾ ತಂಡಗಳಿಂದ ಭಜನೆ, ಸಂಜೆ 4 ರಿಂದ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಶ್ರೀ ಹರಿಗಾನಾಮೃತ, ಸಂಜೆ 6 ರಿಂದ ಸಮಸ್ತ ಹಿಂದೂ ಬಂಧುಗಳ ಸಮ್ಮುಖದಲ್ಲಿ ‘ಶ್ರೀನಿವಾಸ ಕಲ್ಯಾಣೋತ್ಸವ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಶಶಾಂಕ ಕೊಟೇಚಾ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ಪುತ್ತೂರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಪ್ರಚಾರ ಸಮಿತಿ ಸಂಚಾಲ ನವೀನ್ ರೈ ಪಂಜಳ ಉಪಸ್ಥಿತರಿದ್ದರು.