ಬೆಂಗಳೂರು:(ಡಿ.5) ಸ್ನೇಹಿತನೋರ್ವ ಚಿನ್ನಾಭರಣ ಪಡೆದು ವಾಪಸ್ ಕೊಡದೇ ಇದ್ದುದ್ದಕ್ಕೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ರಾಜಾಜಿನಗರದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಿಂದ ಮಹತ್ತರ ಪ್ರಕಟಣೆ
ರಾಜಾಜಿನಗರದ ನಿವಾಸಿಯಾದ ದಿಗಂತ್ ಬಂಧಿತ ಆರೋಪಿ. ನಗರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿ.ಕಾಂ ಪದವಿ ಓದುತ್ತಿದ್ದ ಪ್ರಿಯಾಂಕಾ (19) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಕೆ.
ಘಟನೆ ನಡೆದ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ಸ್ನೇಹಿತ ದಿಗಂತ್ ಹೆಸರನ್ನು ಉಲ್ಲೇಖ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನವಾಗಿದೆ.
ಪ್ರಿಯಾಂಕಾ, ದಿಗಂತ್ ಸ್ನೇಹಿತರು. ಕೆಲ ತಿಂಗಳ ಹಿಂದೆ ಪ್ರಿಯಾಂಕಾ ತನ್ನ 15ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದಿಗಂತ್‌ಗೆ ನೀಡಿದ್ದಳು. ಆದರೆ ಅದನ್ನು ವಾಪಾಸು ಕೊಟ್ಟಿಲ್ಲ. ಪ್ರತಿಸಲ ಕೇಳಿದಾಗ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದ ನೊಂದ ಪ್ರಿಯಾಂಕಾ ನ.28 ರಂದು ನೇಣುಬಿಗಿದುಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಆಕೆಯ ಮೊಬೈಲ್ ಪರಿಶೀಲನೆ ಮಾಡಿದಾಗ ಬ್ಯಾಕ್ ಕವರ್‌ನಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ದಿಗಂತ್ ಹೆಸರು ಬರೆಯಲಾಗಿದೆ. ಹೀಗಾಗಿ ಆರೋಪಿಯ ಬಂಧನವಾಗಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ದಿಗಂತ್‌ಗೆ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನೀಡಿದ್ದೆ. ಚಿನ್ನ ವಾಪಾಸು ಕೊಡದೆ ಮಾನಸಿಕ ಕಿರುಕುಳ ನೀಡುತ್ತಿದ್ದ. ನನ್ನ ಸಾವಿಗೆ ದಿಗಂತ್ ಕಾರಣ ಎಂದು ಡೆತ್‌ನೋಟಲ್ಲಿ ಬರೆಯಲಾಗಿದೆ. ಮೃತ ವಿದ್ಯಾರ್ಥಿನಿಯ ಪೋಷಕರು ದೂರಿನಲ್ಲಿ ಈ ವಿಚಾರವನ್ನು ಉಲ್ಲೇಖ ಮಾಡಿದ್ದಾರೆ.
ಅಂದ ಹಾಗೆ ಮೃತ ಯುವತಿಯ ತಂದೆ ಚಿನ್ನದ ವ್ಯಾಪಾರಿಯಾಗಿದ್ದು, ಇದನ್ನು ತಿಳಿದುಕೊಂಡೇ ಆಕೆಯ ಜೊತೆ ಸ್ನೇಹ ಬೆಳೆಸಿದ್ದ. ಕ್ಯಾಸಿನೋವೊಂದರಲ್ಲಿ ಹಣ ಹೂಡಿ, ಹಣ ದುಪ್ಪಟ್ಟು ಮಾಡುವ ಆಮಿಷವನ್ನು ಈತ ಆಕೆಗೆ ನೀಡಿದ್ದ. ಆದರೆ ಇದನ್ನು ನಂಬಿದ ಪ್ರಿಯಾಂಕಾ, ಮನೆಯವರಿಗೆ ತಿಳಿಸದೆ ಚಿನ್ನಾಭರಣಗಳನ್ನು ತಂದು ದಿಗಂತನಿಗೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.