ಕಲಬುರಗಿ:(ಡಿ.7) ವೈದ್ಯೆಯಾಗಬೇಕೆಂಬ ಕನಸು ನನಸಾಗದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ನಡೆದಿದೆ.
ಇದನ್ನೂ ಓದಿ: ಮಂಗಳೂರು:ವೈನ್ ಪ್ರಿಯರಿಗೆ ಸಿಹಿಸುದ್ದಿ
ಕಲಬುರಗಿ ಮೂಲದ ತನುಜಾ ಎನ್ನುವ ವಿದ್ಯಾರ್ಥಿನಿ, ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದಳು. ಆದ್ರೆ, ಸಿಇಟಿಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಎರಡೂ ಬಾರಿಯೂ ಸಹ ಎಂಬಿಬಿಎಸ್ ಸೀಟು ಸಿಕ್ಕಿರಲಿಲ್ಲ.
ಇದರಿಂದ ಮನನೊಂದಿದ್ದ ತನುಜಾ, ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಅನಂತಪುರ ಜಿಲ್ಲೆಯ ರಾಯದುರ್ಗದ ಬಳಿ ರೈಲಿನಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.
ರಾಯದುರ್ಗದ ಉಪನಗರದ ರೈಲ್ವೆ ಹಳಿಯಲ್ಲಿ ಯುವತಿಯ ಶವವನ್ನು ರೈಲ್ವೆ ಪೊಲೀಸರು ಪತ್ತೆ ಮಾಡಿದ್ದು, ಕೂಡಲೇ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಆದ್ರೆ, ಸಾಯುವ ಮುನ್ನ ತನುಜಾ ತನ್ನ ಪೋಷಕರಿಗೆ ದೂರವಾಣಿ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿರುವುದು ಗೊತ್ತಾಗಿದೆ. ಆಗ ಪೊಲೀಸರಿಗೆ ಇದೊಂದು ಆಕಸ್ಮಿಕ ಸಾವು ಅಲ್ಲ, ಆತ್ಮಹತ್ಯೆ ಎನ್ನುವುದು ಖಚಿತವಾಗಿದೆ.
ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ತನುಜಾ, ಎರಡೂ ಬಾರಿ ಪ್ರಯತ್ನಿಸಿದರೂ ಸಹ ಎಂಬಿಬಿಎಸ್ ಸೀಟು ಸಿಕ್ಕಿರಲಿಲ್ಲ. ಇದರಿಂದ ತನುಜಾ ಹತಾಷೆಗೊಂಡಿದ್ದಳು. ಆದರೂ ಪೋಷಕರು ಮನವೊಲಿಸಿ, ಧೃತಿಗೆಡಬೇಡ ಎಂದು ಧೈರ್ಯ ತುಂಬಿ ಎಂಬಿಬಿಎಸ್ ಸೀಟ್ ಸಿಗದಿದ್ದಕ್ಕೆ ಚಿಂತೆ ಮಾಡದೇ ಬಿ.ಎ.ಎಂ.ಎಸ್ ಮಾಡು ಎಂದು ಹೇಳಿ ಮನವೊಲಿಸಿದ್ದರು.
ಅದರಂತೆ ತನುಜಾ ಬಿ.ಎ.ಎಂ.ಎಸ್ ಪದವಿಗೆ ಪ್ರವೇಶ ಪಡೆದಿದ್ದಳು. ಆದರೂ ಸಹ ತನುಜಾ ಮನಸ್ಸಲ್ಲಿ ಎರಡೂ ಸಲ ಎಂಬಿಬಿಎಸ್ ಸೀಟು ಸಿಗಲಿಲ್ಲವೆಂಬ ನೋವು ಕಾಡುತ್ತಲೇ ಇತ್ತು. ಕೊನೆಗೆ ತನುಜಾ, ಸಾಯುವ ನಿರ್ಧಾರ ಮಾಡಿ ರೈಲಿನಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ.