ಮಂಗಳೂರು:(ಡಿ.7) ಗಾಂಜಾವನ್ನು ಸಂಪೂರ್ಣವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಿಸಲು ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ಅವರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Mangaluru: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹಾಡಿದ ತುಳು ಹಾಡಿಗೆ ಕರಾವಳಿ ಜನರು ಫುಲ್ ಫಿದಾ!!
ಈ ಬಗ್ಗೆ ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, “ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ಡ್ರಗ್ಸ್ ಜಾಲವನ್ನು ನಿಷೇಧಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಚಟದಲ್ಲಿ ಭಾಗಿಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ವಿದ್ಯಾರ್ಥಿಗಳ ಚಲನವಲನಗಳನ್ನು ಆಪ್ತ ಸಮಾಲೋಚಕರನ್ನಿಟ್ಟುಕೊಂಡು ಗಮನಿಸಿ,
ವಿದ್ಯಾರ್ಥಿಗಳ ಮನಃಪರಿವರ್ತನೆ ಹಾಗೂ ಅವರಿಗೆ ಎಲ್ಲಿಂದ ಡ್ರಗ್ಸ್ ಲಭ್ಯವಾಗುತ್ತಿದೆ ಎಂಬುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಇದರಿಂದ ಪೊಲೀಸರ ಕಾರ್ಯಾಚರಣೆಯು ಸುಲಭ,” ಎಂದು ತಿಳಿಸಿದರು. “ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಆಗಾಗ ವಿದ್ಯಾರ್ಥಿಗಳನ್ನು ಪರೀಕ್ಷಿಸಬೇಕು. ವಿದ್ಯಾರ್ಥಿಗಳಿಗೆ ಅಂಚೆ ಕಚೇರಿಗೆ ಬರುವ ಪಾರ್ಸೆಲ್‌ಗಳು ಅನುಮಾನಾಸ್ಪದವಾಗಿ ತೋರಿದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಶಾಲೆಯ ಮರ್ಯಾದೆ ಹೋಗುತ್ತದೆ ಎಂದು ಇಂತಹ ವಿಚಾರಗಳನ್ನು ಮುಚ್ಚಿಡಬೇಡಿ,” ಎಂದರು.
“ಇನ್ನು ಜಿಲ್ಲೆಯಾದ್ಯಂತಹ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಎಲ್ಲ ಬಸ್ ಚಾಲಕ, ನಿರ್ವಾಹಕರು ಗಳಿಗೆ ಸಭೆ ನಡೆಸಬೇಕು. ಬಸ್ ಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಬೇಕು. ಸಾರ್ವಜಿನಿಕರು ಓಡಾಡುವ ಎಲ್ಲಾ ಕಡೆಗಳಲ್ಲಿ” ಸಹಾಯವಾಣಿ ಸಂಖ್ಯೆ ನಂಬರ್ 1933 ಅನ್ನು ನಮೂದಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್‌ಪಿ ಯತೀಶ್, ಡಿಸಿಪಿ, ಸಿದ್ದಾರ್ಥ್ ಗೋಯಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.