ಬೆಂಗಳೂರು (ಡಿ.8): ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು 14 ವರ್ಷದ ಬಳಿಕ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಆಸಿಫ್ ಬಂಧಿತ ಆರೋಪಿ.
ಮದುವೆಯಾಗಿದ್ದ ಆಸಿಫ್ಗೆ ಇಬ್ಬರು ಗರ್ಲ್ ಫ್ರೆಂಡ್ಸ್ ಇದ್ದರು. ಗರ್ಲ್ ಫ್ರೆಂಡ್ಸ್ಗಾಗಿ ಬೈಕ್ ಕಳ್ಳತನ, ದರೋಡೆ, ಕೊಲೆ ಯತ್ನ ಕೂಡ ಮಾಡಿದ್ದನು. ಕದ್ದ ಬೈಕ್ನಲ್ಲಿ ಪ್ರಿಯತಮೆಯರನ್ನು ಜಾಲಿ ರೈಡ್ಗೆ ಕರೆದೊಯ್ಯುತ್ತಿದ್ದನು. ಬಳಿಕ, ಪ್ರಿಯತಮೆಯನ್ನು ಡ್ರಾಪ್ ಮಾಡಿ ಅಲ್ಲಿಯೇ ಬೈಕ್ ಬಿಟ್ಟು ಬರುತ್ತಿದ್ದನು.
ಆರೋಪಿ ಆಸಿಫ್ ವಿರುದ್ಧ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿವೆ. ಆರೋಪಿ ಆಸಿಫ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದನು.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಹೀಗಾಗಿ, ಹಲಸೂರು ಗೇಟ್ ಪೊಲೀಸರು ಆರೋಪಿ ಆಸಿಫ್ಗಾಗಿ ಹುಡುಕಾಟ ನಡೆಸಿದ್ದರು.
ಆರೋಪಿ ಆಸಿಫ್ನ ದಿನಚರಿ ತಿಳಿದು ಪೊಲೀಸರು ಬೆನ್ನುಹತ್ತಿದ್ದರು. ಕೊನೆಗೂ ಹಲಸೂರು ಗೇಟ್ ಪೊಲೀಸರು ಆರೋಪಿ ಆಸಿಫ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.