ಕೇರಳ:(ಡಿ.9) ಮನೆಯವರ ವಿರೋಧದ ನಡುವೆ ಕೇರಳ ಮೂಲದ ಯುವಕನ ಜೊತೆ ಮದುವೆಯಾಗಿದ್ದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಕೇರಳದ ತಿರುವನಂತಪುರಂ ಜಿಲ್ಲೆಯ ಪಾಲೋಡ್‌ನ ಇಳವಟ್ಟಂನಲ್ಲಿ ನಡೆದಿದೆ.
ಇದನ್ನೂ ಓದಿ: ಉಡುಪಿ: ಶ್ರೀಕೃಷ್ಣಮಠಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಭೇಟಿ
ಇಂದುಜಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಗಳ ಸಾವಿಗೆ ಆಕೆಯ ಗಂಡ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ. ಪಾಲೋಡ್ ಇಟಿಂಜಾರ್ ಕೊಳಚಲ್ ಕೊನ್ನಮೂಡ್ ಮೂಲದ ಇಂದುಜಾ (25) ಗಂಡನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದುಜಾ ಅಭಿಜಿತ್ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದು, ಇವರಿಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ, ಇವರ ಮಾತನ್ನು ಕೇಳದೆ ಮನೆ ಬಿಟ್ಟು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಳು ಈಕೆ. ಅನಂತರದ ಬೆಳವಣಿಗೆಯಲ್ಲಿ ಇಂದುಜಾ ಪೋಷಕರು ಸುಮ್ಮನಾಗಿದ್ದರು.
ಮದುವೆಯಾಗಿ ಅಭಿಜಿತ್ ಮನೆಗೆ ಹೋದ ಇಂದುಜಾಗೆ ಅಲ್ಲಿ ನಿತ್ಯವೂ ನರಕಯಾತನೆ ಶುರುವಾಗಿತ್ತು. ಮಾನಸಿಕ ಕಿರುಕುಳ, ಬೆದರಿಕೆಯನ್ನು ಗಂಡನ ಮನೆಯವರು ಹಾಕುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇಂದುಜಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ. ಮನೆಯ ಎರಡನೇ ಮಹಡಿಯಲ್ಲಿರುವ ಅಭಿಜಿತ್ ಮಲಗುವ ಕೋಣೆಯ ಕಿಟಕಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಭಿಜಿತ್ ನನ್ನು ಬಂಧಿಸಲು ಒತ್ತಾಯಿಸಿದ್ದಾರೆ.
ಅಭಿಜಿತ್ ಮಧ್ಯಾಹ್ನ ಮನೆಗೆ ಊಟ ಮಾಡಲು ಬಂದಾಗ ಇಂದುಜಾ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ ಎನ್ನಲಾಗಿದೆ. ಕೂಡಲೇ ಆಕೆಯನ್ನು ನೆಡುಮಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಎರಡು ವರ್ಷ ಪ್ರೀತಿ ಮಾಡಿ ಮದುವೆಯಾಗಿದ್ದ ಈಕೆಗೆ ಆಕೆಯ ಪ್ರೀತಿಸಿದ ಗಂಡನೇ ಆಕೆಯ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇಂದುಜಾ ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಭಿಜಿತ್ ಖಾಸಗಿ ವಾಹನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ಸಮಯದಲ್ಲಿ ಅಭಿಜಿತ್ ಅಜ್ಜಿ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದುಜಾ ತಾಯಿ ಹಾಗೂ ಸಹೋದರನ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಳು ಎಂದು ಆಕೆಯ ಗಂಡನ ಮನೆಯವರು ಹೇಳಿದ್ದಾರೆ. ಈಕೆ ತನ್ನ ಗಂಡನ ಮನೆಯವರ ಕಿರುಕುಳ, ಬೆದರಿಕೆ ಕುರಿತು ಹೇಳುತ್ತಿದ್ದಳು. ಮಗಳ ಸಾವಿನಲ್ಲಿ ಅನೇಕ ಅನುಮಾನಗಳಿದ್ದು, ಸೂಕ್ತ ತನಿಖೆಯನ್ನು ಮಾಡಬೇಕೆಂದು ಮೃತಳ ಪೋಷಕರು ಒತ್ತಾಯ ಮಾಡಿದ್ದಾರೆ.