ಕಂಕನಾಡಿ:(ಡಿ.11) ಕಾರಿನ ಗಾಜು ಒಡೆದು ಚಿನ್ನಾಭರಣ ಕಳವು ಮಾಡಿರುವ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ. ಕಂಕನಾಡಿ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಕ್ರೆಟಾ ಕಾರಿನಿಂದ ಗ್ಲಾಸ್ ಒಡೆದು ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗನ್ನು ಕಳ್ಳನೊಬ್ಬ ಎಗರಿಸಿದ್ದ.
ಇದನ್ನೂ ಓದಿ: ಉಡುಪಿ: ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆ
ಡಿ.8ರ ಭಾನುವಾರ ರಾತ್ರಿ 10.30ರ ವೇಳೆಗೆ ಘಟನೆ ನಡೆದಿತ್ತು. ಬ್ಯಾಗ್ ನಲ್ಲಿ 6.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲ್ಯಾಪ್ ಟಾಪ್ ಇತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ವ್ಯಾನಿಟಿ ಬ್ಯಾಗ್ ನ ಮಾಲಕಿ ಪ್ರಕರಣ ದಾಖಲಿಸಿದ್ದರು.
ದೂರು ದಾಖಲಾದ ಬೆನ್ನಲ್ಲೇ ಸಿಸಿ ಟಿವಿ ಪರೀಕ್ಷಿಸಿ ಕಳ್ಳನ ಬೇಟೆಗೆ ಪೊಲೀಸರು ಇಳಿದಿದ್ದಾರೆ. ಕಳ್ಳತನ ನಡೆದು 24 ಗಂಟೆಯೊಳಗೆ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಆರೋಪಿಯನ್ನು ಅಡ್ಯಾರ್ ಪದವು ನಿವಾಸಿ ಅಬ್ದುಲ್ ಅಕ್ರಂ (33) ಎಂದು ಗುರುತಿಸಲಾಗಿದೆ.
ಅಕ್ರಂ ಮೊದಲ ಬಾರಿಗೆ ಕಳವು ಕೃತ್ಯ ನಡೆಸಿದ್ದು ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬಳಸಿದ್ದ ಆಕ್ಸೆಸ್ ಸ್ಕೂಟರ್ ಹಾಗೂ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದಂತೆ 7.30 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.