ಕೇರಳ: (ಡಿ.13) ಪಾಲಕ್ಕಾಡ್ ಜಿಲ್ಲೆಯ ಕಲ್ಲಡಿಕ್ಕೋಡ್ ಎಂಬಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ, ಮನ್ನಾರ್ಕಾಡ್ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ನಾಲ್ವರು ಮಕ್ಕಳು ದಾರುಣ ಅಂತ್ಯ ಕಂಡಿದ್ದಾರೆ. ಕೋಝಿಕ್ಕೋಡ್- ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯ ಕಲ್ಲಕ್ಕೋಡ್ ಪನಯಂಬಡದಲ್ಲಿ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: Allu Arjun Arrest: ನಟ ಅಲ್ಲು ಅರ್ಜುನ್ ಅರೆಸ್ಟ್
ಕರಿಂಬ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಇರ್ಫಾನಾ, ಮಿತ, ರಿದಾ ಮತ್ತು ಆಯಿಶಾ ಮೃತಪಟ್ಟಿದ್ದಾರೆ. ಸಂಜೆ 4ರ ವೇಳೆ ಶಾಲೆಯಿಂದ ಮನೆಗೆ ಮರಳಲು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಘಟನೆ ನಡೆದಿದೆ. ನಿಯಂತ್ರಣ ತಪ್ಪಿ ವೇಗವಾಗಿ ಬಂದ ಲಾರಿಯನ್ನು ನೋಡಿ ಒಬ್ಬಳು ವಿದ್ಯಾರ್ಥಿನಿ ದೂರ ಜಿಗಿದಿದ್ದಾಳೆ. ಲಾರಿ ಇತರ ಮಕ್ಕಳ ಮೇಲೆ ಹರಿದು ಪಲ್ಟಿಯಾಗಿದೆ. ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಅತಿವೇಗದಲ್ಲಿ ಬಂದ ಲಾರಿ ಮಳೆಗೆ ನಿಯಂತ್ರಣ ತಪ್ಪಿ ಮನೆ ಸಮೀಪದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸಿಮೆಂಟ್ ಲಾರಿಯಡಿಯಲ್ಲಿ 5 ಮಕ್ಕಳಿದ್ದರು ಎಂದು ಸ್ಥಳೀಯರು ಹೇಳಿದ ಹಿನ್ನೆಲೆಯಲ್ಲಿ ಕ್ರೇನ್ ಬಳಸಿ ಲಾರಿಯನ್ನು ಸಂಪೂರ್ಣವಾಗಿ ಮೇಲೆತ್ತಲಾಗಿದೆ. ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಮನ್ನಾರ್ಕ್ಕಾಡ್ ಮದರ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಸರಗೋಡು ನಿವಾಸಿಗಳಾದ ಲಾರಿ ಚಾಲಕ ಮಹೇಂದ್ರ ಪ್ರಸಾದ್ ಮತ್ತು ಕ್ಲೀನರ್ ವರ್ಗೀಸ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೇರೊಂದು ಲಾರಿಗೆ ಸೈಡ್ ನೀಡುವಾಗ ಬ್ರೇಕ್ ಹಾಕಿದರೂ ಮಳೆಗೆ ರಸ್ತೆ ಜಾರುತ್ತಿದ್ದ ಕಾರಣ ವಾಹನ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಲಾರಿ ಚಾಲಕ ತಿಳಿಸಿದ್ದಾರೆ.