ಉಜಿರೆ(ಡಿ. 13): ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಕ್ರೀಡೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಡಿ. 12ರಂದು ನಡೆಯಿತು.
ಬಹುಮಾನ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ, ಉಜಿರೆ ಎಸ್‌ಡಿಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶಾರದ ಬಾರ್ಕೂರು ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಯ ಮೆಟ್ಟಿಲುಗಳನ್ನು ಏರಬೇಕು ಎಂದು ಹೇಳಿದರು.
ರಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಎರಡು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದ ಮೊದಲ ಶೂಟರ್ ಕರೋಲಿ ಟಕಾಕ್ಸ್ ಅವರ ಕ್ರೀಡಾ ಸಾಧನೆಯನ್ನು ವಿವರಿಸಿದರು.
“ಕರೋಲಿ ಟಕಾಕ್ಸ್ 1938ರಲ್ಲಿ ಹಂಗೇರಿಯನ್ ಪಿಸ್ತೂಲ್ ಶೂಟಿಂಗ್ ತಂಡದ ಸದಸ್ಯರಾಗಿದ್ದರು. ಸೈನ್ಯದಲ್ಲಿ ಸಾರ್ಜೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ದೋಷಯುಕ್ತ ಗ್ರೆನೇಡ್ ಅವರ ಬಲಗೈಯಲ್ಲಿ ಸ್ಫೋಟಿಸಿತ್ತು. ಕೈ ಸಂಪೂರ್ಣ ಛಿದ್ರಗೊಂಡಿತ್ತು. ಆಸ್ಪತ್ರೆಯಲ್ಲಿ ಒಂದು ತಿಂಗಳು ಕಳೆದ ನಂತರ, ಟಕಾಕ್ಸ್ ತನ್ನ ಎಡಗೈಯಿಂದ ಗುಂಡು ಹಾರಿಸಲು ರಹಸ್ಯವಾಗಿ ಕಲಿತುಕೊಂಡರು. ಸಾಧಿಸುವ ಛಲವಿದ್ದಲ್ಲಿ ನ್ಯೂನತೆಗಳು ಶೂನ್ಯವಾಗುವವು” ಎಂದು ಅವರು ತಿಳಿಸಿದರು.
ಶಾಲಾ ಮುಖ್ಯಶಿಕ್ಷಕಿ ವಿದ್ಯಾಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.